ಅ.18 ರಂದು ಮಕ್ಕಳ ದಸರಾಗೆ ಚಾಲನೆ: ಸಚಿವ ಮಧು ಬಂಗಾರಪ್ಪ ಉದ್ಘಾಟನೆ

ಹೊಸ ದಿಗಂತ ವರದಿ , ಮೈಸೂರು:

ಮಹಿಳಾ ಹಾಗೂ ಮಕ್ಕಳ ದಸರಾ ಉಪಸಮಿತಿ ವತಿಯಿಂದ ಅ.18 ರಂದು ಬೆಳಿಗ್ಗೆ 10.30 ಕ್ಕೆ ಮಕ್ಕಳ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಹಾಗೂ ಮಕ್ಕಳ ದಸರಾ ಉಪಸಮಿತಿಯ ಕಾರ್ಯದರ್ಶಿ  ಎಚ್.ಕೆ ಪಾಂಡು ತಿಳಿಸಿದರು.

ಶನಿವಾರ ಮೈಸೂರಿನ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮಕ್ಕಳ ದಸರಾ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18 ಮತ್ತು 19 ರಂದು ಜಗನ್ಮೋಹನ ಅರಮನೆ ಆವರಣದಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪರವರು ನೆರವೇರಿಸುವರು ಎಂದು ತಿಳಿಸಿದರು.

ಹಲವಾರು ಕಾರ್ಯಕ್ರಮಗಳ ಮೂಲಕ ಎರಡು ದಿನಗಳ ಕಾಲ ಶಾಲಾ ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಲಾಗುವುದು. ಶಾಲಾ ಮಕ್ಕಳಿಗಾಗಿ ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಿವಿಧ ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ, ಮಾತನಾಡುವ ಗೊಂಬೆ, ಶೈಕ್ಷಣಿಕ ನಾಟಕ ಪ್ರದರ್ಶನ, ಯೋಗ ನೃತ್ಯ ಜೊತೆಗೆ ದೇಸಿ ಆಟಗಳನ್ನು ಆಯೋಜಿಸಲಾಗಿದೆ ಎಂದರು.

ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಅರಣ್ಯ ಉತ್ಪನ್ನಗಳು, ಪರಿಸರ ಸಂರಕ್ಷಣೆ, ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು, ಆರೋಗ್ಯ ಮತ್ತು ಪೌಷ್ಟಿಕಾಂಶ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ವಿಶೇಷವಾಗಿ ಚಂದ್ರಯಾನ ಹಾಗೂ ಆದಿತ್ಯಯಾನ ಕುರಿತಾದ ವಿಶೇಷ ಪ್ರದರ್ಶನ, ಶಿಕ್ಷಣದಲ್ಲಿ ರಂಗ ಕಲೆ, ಮೈಸೂರು ದಸರಾ ಪರಂಪರೆಯ ವಿವಿಧ ಪ್ರದರ್ಶನ ಆಯೋಜಿಸಲಾಗುತ್ತದೆ. ಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸಂಗೀತ ಹಾಗೂ ಕ್ರೀಡಾ ವಿಭಾಗದಲ್ಲಿ ಹೆಸರು ಮಾಡಿದ ಬೆಸ್ಟ್ ಎಂಟರ್ಟೈನರ್ ಸರಿಗಮಪ ಸೀಸನ್ 19ರ ಸ್ಪರ್ಧಿ  ದಿಯಾ ಹೆಗಡೆ ಮತ್ತು  ಪ್ರಗತಿ ಬಡಗೇರ್, ರಾಜ್ಯಮಟ್ಟದ ಸೋಲೊ ಡ್ಯಾನ್ಸ್ ವಿಜೇತ ಜಿ.ಎಂ ಗಂಗಾಧರ್, ಖೋ-ಖೋ ರಾಷ್ಟ್ರೀಯ ಕ್ರೀಡಾಪಟು  ಮಾನಸರವರು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಹಾಗೂ ಮಕ್ಕಳ ದಸರಾ ಉಪ ಸಮಿತಿ ಸದಸ್ಯರಾದ ಉದಯಕುಮಾರ್, ದೇವರಾಜು ಹಾಗೂ ಸೋಮಣ್ಣಗೌಡ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!