Monday, March 4, 2024

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ, ವಿದೇಶಿಯರೂ ಭಾಗಿ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ನಗರದ ಕೇಶ್ವಾಪುರದ ಆಕ್ಸ್‌ಫರ್ಡ್ ಕಾಲೇಜು ಬಳಿಯ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ, ಕ್ಷಮತಾ ಸೇವಾ ಸಂಸ್ಥೆಯಿಂದ ಆಯೋಜಿಸಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಜಿ ಶನಿವಾರ ಚಾಲನೆ ನೀಡಿದರು.

ಬಳಿಕ ಆಶೀರ್ವಚನ ನೀಡಿದ ಅವರು, ಗಾಳಿಪಟ ಉತ್ಸವ ಚಿಕ್ಕವರಿಂದ ಹಿರಿಯರ ಮನಸ್ಸಿಗೆ ಮುದುಗೊಳಿಸುತ್ತದೆ. ಇಂತಹ ಉತ್ಸವ ಆಯೋಜಿಸಿರುವುದು ಸಂತಸದ ಸಂಗತಿ. ಪ್ರತಿಯೊಬ್ಬರ ಬದುಕಿನ ಸಾಧನೆ ಗಾಳಿಪಟದಂತೆ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.

ಕಲೆ, ಸಂಸ್ಕೃತಿ ರಕ್ಷಣೆಗೆ ಆದ್ಯತೆ ನೀಡಬೇಕು. ಆ ಕೆಲಸವನ್ನು ಪ್ರಹ್ಲಾದ ಜೋಶಿ ಮಾಡುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಲಿ, ಮತ್ತೊಮ್ಮೆ ಸಂಸತ್‌ನಲ್ಲಿ ನೋಡುವಂತಾಗಲಿ ಎಂದರು.

ಗಾಳಿಪಟ ಉತ್ಸವದಲ್ಲಿ ರಾಜ್ಯವಲ್ಲದೆ, ದೇಶ-ವಿದೇಶದ ಒಟ್ಟು 45 ಗಾಳಿಪಟು ತಜ್ಞರು ಭಾಗವಹಿಸಿದ್ದರು. ಇಂಗ್ಲೆಂಡ್, ಇಂಡೋನೇಷ್ಯಾ, ಸ್ಲೋವೆನಿಯಾ, ನೆದರ್‌ಲ್ಯಾಂಡ್, ಗ್ರೀಸ್, ಹಾಲೆಂಡ್ ದೇಶದ 9 ಮಂದಿ ಹಾಗೂ ದೇಶದ ನಾಗ್ಪುರ, ಸೂರತ್, ರಾಜಸ್ತಾನ, ಪಂಜಾಬ್, ಓಡಿಸಾದಿಂದ ಪುಣೆ, ವಡೋದರಾದಿಂದ 21 ಹಾಗೂ ರಾಜ್ಯದ ದೊಡ್ಡಬಳ್ಳಾಪುರದಿಂದ 7, ಬೆಂಗಳೂರು 4, ಬೆಳಗಾವಿಯಿಂದ 4 ಮಂದಿ ಪಾಲ್ಗೊಂಡು ನೆಚ್ಚಿನ ಗಾಳಿಪಟಗಳನ್ನು ಹಾರಿಸಿದರು.

ಆಕ್ಟೋಪಸ್, ಲಿಫ್ಟರ್ಸ್, ರಿಂಗ್, ಡೆಲ್ಟಾ, ಟ್ರೇನ್, ಐ ಲವ್ ಇಂಡಿಯಾ, ಬೇಟಿ ಬಚಾವೋ ಬೇಟಿ ಪಡಾವೋ, ಮಾರಿಯೋ, ಟೈಗರ್, ಫಿಶ್, ಗರುಡ, ಸೈಡರ್‌ಮ್ಯಾನ್, ಸೈನಿಕ, ಸ್ಟ್ರಾಬೇರಿ, ಕಾಂತಾರ ಸಿನಿಮಾದ ಪಂಜುರ್ಲಿ ಸೇರಿದಂತೆ ವಿವಿಧ ಚಿತ್ರವಿದ್ದ ಗಾಳಿಪಟಗಳು ಆಗಸದಲ್ಲಿ ಹಾರಾಡಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!