ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜಿಲ್ಲೆಯಲ್ಲಿ ಕಾನೂನು ನಿರ್ವಹಣೆ ಮಾಡುವವರೇ ಇಲ್ಲವಾಗಿದೆ, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ನಾಲ್ಕರ್ ಕ್ರಾಸ್ ಘಟನೆ ಅತ್ಯಂತ ಖಂಡನೀಯ. ಒಂದೇಡೆ ಮುಸ್ಲಿಂ ತುಷ್ಟೀಕರಣ ನಡೆಸುವ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಹೆಣ್ಣುಮಗಳ ರಕ್ಷಣೆಗೆ ನಿಲ್ಲದಿರುವುದು ವಿಷಾಧಕರ. ಕನಿಷ್ಟ ಪಕ್ಷ ಸಂತ್ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆಯಾಗಲಿ ಭೇಟಿ ಮಾಡಿ ಧೈರ್ಯ ತುಂಬದಿರುವುದು ನೋವಿನ ಸಂಗತಿ ಎಂದರು.
ಈ ಪ್ರಕರಣದ ಆರೋಪಿತರ ರಕ್ಷಣೆಗೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಇದರಲ್ಲಿ ಪೊಲೀಸರೂ ಕೂಡ ಶಾಮೀಲಾಗಿದ್ದಾರೆಯೇ ಎಂದು ಅನುಮಾನ ಮೂಡುವಂತಿದೆ. ಅಲ್ಲದೆ ಈ ಪ್ರಕರಣದ ಆರೋಪಿತರಿಗೆ ನಿಷೇದಿತ ಪಿಎಫ್‌ಐ ಸಂಘಟನೆಯ ನಂಟಿದೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಅದನ್ನು ಪೊಲೀಸ್ ಇಲಾಖೆ ಸಮಗ್ರವಾಗಿ ಪರಿಶೀಲನೆ ನಡೆಸಿ, ಸತ್ಯವನ್ನು ಜನರಿಗೆ ತಿಳಿಸಬೇಕು.
ಅಲ್ಲದೇ ಈ ಪ್ರಕರಣದ ಆರೋಪಿತರು, ಇಂಥ ಅತ್ಯಾಚಾರದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಕುರಿತು ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಕೂಡಲೇ ಎಲ್ಲ ಆರೋಪಿತರ ಎಲ್ಲಾ ಕೃತ್ಯಗಳನ್ನು ಬಯಲಿಗೆ ಎಳೆಯಬೇಕೆಂದು ಆಗ್ರಹಿಸಿದರು.
ಹಾನಗಲ್ಲ ತಾಲೂಕಿನಲ್ಲಿಯೇ ಕಳೆದ ಮೂರು ತಿಂಗಳಲ್ಲಿ ಇಂಥ ನಾಲ್ಕು ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ನಡೆಗೆ ಹಿಡಿದ ಕನ್ನಡಿ. ಇಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯವನ್ನು ತಡೆಯಲು ಮುಂದಾಗಿಲ್ಲ, ಈ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎಂಬುದೇ ಇಲ್ಲ, ಈ ವೈಫಲ್ಯಕ್ಕೆ ಹೊಣೆ ಮಾಡಿ ಪಿಎಸ್‌ಐ ಹಾಗೂ ಸಿಪಿಐ ಅವರನ್ನು ಅಮಾನತು ಮಾಡಬೇಕೆಂದು ಹೇಳಿದರು.
ಇನ್ನು ಇದೇ ಜಿಲ್ಲೆಯಲ್ಲಿ ವಿಧಾನಸಭೆಯ ಉಪಸಭಾಪತಿ ಇದ್ದು, ಅವರೂ ಸೇರಿದಂತೆ ಜಿಲ್ಲೆಯ ಅಥವಾ ರಾಜ್ಯದ ಯಾವುದೇ ಶಾಸಕ ಸಚಿವರು ಈ ಘಟನೆ ಖಂಡಿಸದಿರುವುದು ವಿಷಾಧಕರ. ಬೆಳಗಾವಿ ಘಟನೆ ನಡೆದ ಕೆಲವೇ ಘಂಟೆಯಲ್ಲಿ ಸಂತ್ರಸ್ತೆಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ, ಪರಿಹಾರ ನೀಡಿದ್ದ ಸರ್ಕಾರ ಈಗೇಕೆ ಈ ಘಟನೆಯಲ್ಲಿ ಸುಮ್ಮನಿದೆ. ಅಂದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿತ್ಯ ಮಹಿಳೆಯರಿಗೆ ಕಿರುಕುಳ ಎಂಬುದು ಅವರ ಸರ್ಕಾರದ ೬ನೇ ಗ್ಯಾರಂಟಿಯೇ ಎಂದು ಪ್ರಶ್ನಿಸಿದರು.