ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಕೀಲರ ಉಡುಪನ್ನು ಧರಿಸದೆ ಮತ್ತು ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಬಂದಿದ್ದ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿ.ಆರ್. ಸಿಂಗ್ ಅವರ ವಿಭಾಗೀಯ ಪೀಠವು ವಕೀಲ ಅಶೋಕ್ ಪಾಂಡೆ ವರ್ತನೆಗೆ ಕೋಪಗೊಂಡು ಶಿಕ್ಷೆಯನ್ನು ಘೋಷಿಸಿದ್ದಾರೆ. 2,000 ರೂ. ದಂಡವನ್ನೂ ವಿಧಿಸಿದ ನ್ಯಾಯಪೀಠ, ತಪ್ಪಿದಲ್ಲಿ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.
ವಕೀಲರು ಸರಿಯಾದ ಸಮವಸ್ತ್ರವಿಲ್ಲದೆ ನ್ಯಾಯಾಲಯಕ್ಕೆ ಹಾಜರಾಗಿದ್ದನ್ನು ನ್ಯಾಯಾಲಯ ಸ್ವಯಂಪ್ರೇರಿತವಾಗಿ ಗಮನಿಸಿದೆ. ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ನ್ಯಾಯಾಲಯದಿಂದ ಹೊರಹೋಗುವಂತೆ ಹೇಳಿದ ನ್ಯಾಯಾಧೀಶರನ್ನು ‘ಗೂಂಡಾಗಳು’ ಎಂದು ಕರೆದಿದ್ದಾರೆ.
ಶಿಕ್ಷೆಯನ್ನು ಅನುಭವಿಸಲು ಲಕ್ನೋ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗಲು ವಕೀಲರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಇದರೊಂದಿಗೆ 2,000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸೂಚಿಸಿದೆ.
ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಖನೌ ಪೀಠದಲ್ಲಿ ವಕೀಲಿ ವೃತ್ತಿಯಿಂದ ನಿಮ್ಮನ್ನು ಏಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿ, ವಕೀಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಪೀಠವು, ಮೇ 1ರವರೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಿದೆ.
ಈಮಧ್ಯೆ, ವಕೀಲರ ಹಿಂದಿನ ನಡವಳಿಕೆ ಮತ್ತು ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಪಾಂಡೆ ಅವರಿಗೆ ಇತರರಿಗೂ ಪಾಠವಾಗುವಂತೆ ಶಿಕ್ಷೆ ನೀಡಲಾಗಿದೆ ಎಂದು ಪೀಠ ತಿಳಿಸಿದೆ.