ಸಚಿವ ಶ್ರೀರಾಮುಲುಗೆ ಹಾರ ಹಾಕಿ, ಮುತ್ತಿಟ್ಟು ತಬ್ಬಿಕೊಂಡ ಶಾಸಕ ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ತವರು ಜಿಲ್ಲೆ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ‌ ನೇಮಕಗೊಂಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಮಂಗಳವಾರ ಸಂಜೆ ನಗರಕ್ಕೆ ಆಗಮಿಸುತ್ತಿದ್ದಂತೆ, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ ಸೇರಿದಂತೆ ಪಕ್ಷದ ನಾನಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಹೊರವಲಯದ ಮುಖ್ಯರಸ್ತೆ ಬಳಿ, ಶಾಸಕ ಸೋಮಶೇಖರ್ ರೆಡ್ಡಿ, ಬೂಡಾ ಅಧ್ಯಕ್ಷ ಪಿ.ಪಾಲನ್ನ ಸೇರಿದಂತೆ ಸಚಿವರ ಬೆಂಬಲಿಗರು, ಅಭಿಮಾನಿಗಳು, ಮುಖಂಡರು ಜಮಾಯಿಸಿದ್ದರು. ಸಚಿವ ಬಿ. ಶ್ರೀರಾಮುಲು ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಶಾಸಕ ಸೋಮಶೇಖರ್ ರೆಡ್ಡಿ ಅವರು ಬೃಹತ್ ಹೂವಿನ ಹಾರ ಹಾಕಿ ಮುತ್ತಿಟ್ಟು, ಕೆಲ ಹೊತ್ತು ತಬ್ಬಿಕೊಂಡು, ಶುಭಾಷಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದೆ ಜೆ.ಶಾಂತಾ, ರಾಬಕೋ ನಿರ್ದೇಶಕ ಜಿ.ವೀರಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲನಗೌಡ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಕೃಷ್ಣಾ ರೆಡ್ಡಿ, ರಾಮಾಂಜಿನಿ ಸೇರಿದಂತೆ ಅಪಾರ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಎರ್ರಿತಾತನ ದರ್ಶನ ಪಡೆದ ಸಚಿವ: ಸಚಿವ ಬಿ.ಶ್ರೀರಾಮುಲು ಅವರು, ಗಣಿನಾಡು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡುವ ಮುನ್ನ ಸಮೀಪದ ಪ್ರಸಿದ್ಧ ಶ್ರೀಕ್ಷೇತ್ರ ಚಳ್ಳಗುರ್ಕಿ ಎರ್ರಿತಾತ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ವಿಶೇಷ ಪೂಜೆ, ಅರ್ಚನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳು, ಸಚಿವರನ್ನು ಸನ್ಮಾನಿಸಿ, ಫಲ, ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ, ಬೂಡಾ ಅಧ್ಯಕ್ಷ ‌ಪಿ.ಪಾಲನ್ನ, ಮುಖಂಡರಾದ ತಿಮ್ಮಪ್ಪ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!