ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ತೆಲಂಗಾಣ ಹೈಕೋರ್ಟ್ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಕಡೆಗೆ ನಡೆಸಿದ ಪಾದಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಕೀಲರ ಸಮೂಹ ತೀವ್ರ ಆಕ್ರೋಶ ಹೊರಹಾಕಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ‘ಇಂಡಿ ಒಕ್ಕೂಟ’ದ ನಾಯಕರು ಸುಪ್ರೀಂ ಕೋರ್ಟ್ಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಬೆನ್ನಲ್ಲೇ ಈ ಹೊಸ ಕಾನೂನು ಸಂಘರ್ಷ ಆರಂಭವಾಗಿದೆ.
‘ರಾಹುಲ್ ಗಾಂಧಿಗೆ ನ್ಯಾಯಾಂಗದ ಮೇಲೆ ಗೌರವವಿಲ್ಲ’
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದ್ರ ರಾವ್ ಅವರು ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ‘ರಾಹುಲ್ ಗಾಂಧಿ ಅವರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕನಿಷ್ಠ ಗೌರವವೂ ಇಲ್ಲ. ಸುಪ್ರೀಂ ಕೋರ್ಟ್ಗೆ ರ್ಯಾಲಿ ನಡೆಸಿ, ಅಲ್ಲಿ ತಾಂತ್ರಿಕ ಲೋಪದೋಷಗಳಿಂದ ಕೂಡಿದ ತಪ್ಪು ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ಧ್ವಂಸಗೊಳಿಸುವುದೇ ಇವರ ಏಕೈಕ ಉದ್ದೇಶವಾಗಿದೆ. ರಾಹುಲ್ ಗಾಂಧಿ ಅವರು ಇಡೀ ನ್ಯಾಯಾಂಗ ಸಮುದಾಯ ಮತ್ತು ನ್ಯಾಯಾಧೀಶರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ನದ್ದು ಕೇವಲ ರಾಜಕೀಯ ಡ್ರಾಮಾ
ಹಿರಿಯ ವಕೀಲ ಹಾಗೂ ಬಿಜೆಪಿ ನಾಯಕ ಕರುಣಾ ಸಾಗರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಯಾವಾಗಲೂ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಾರೆಯೇ ಹೊರತು, ಅದನ್ನು ಎಂದಿಗೂ ಓದುವ ಪ್ರಯತ್ನ ಮಾಡುವುದಿಲ್ಲ. ಮುಖ್ಯ ಚುನಾವಣಾ ಆಯುಕ್ತರು ಸಾಂವಿಧಾನಿಕವಾಗಿ ನೇಮಕಗೊಂಡ ಅಧಿಕಾರಿಯೇ ಹೊರತು ನೇರವಾಗಿ ಜನರಿಂದ ಚುನಾಯಿತರಾದವರಲ್ಲ. ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಅವರನ್ನು ಏಕಪಕ್ಷೀಯವಾಗಿ ಹುದ್ದೆಯಿಂದ ತೆಗೆದುಹಾಕಲು ಒತ್ತಾಯಿಸಲು ಇವರಿಗೆ ಯಾವುದೇ ಹಕ್ಕಿಲ್ಲ. ನಿಮ್ಮ ಬಳಿ ಪುರಾವೆಗಳಿದ್ದರೆ ಅದನ್ನು ನ್ಯಾಯಾಲಯ ಅಥವಾ ಸಂಸತ್ತಿನ ಮುಂದೆ ಇಡಿ. ಪ್ರಜಾಪ್ರಭುತ್ವವನ್ನು ಉಳಿಸುವ ಹೆಸರಿನಲ್ಲಿ ಕೇವಲ ರಾಜಕೀಯ ನಾಟಕವಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದರು.
ಇದನ್ನೂ ಓದಿ:
ಸುಪ್ರೀಂ ಕೋರ್ಟ್ನಲ್ಲಿ ರಾಹುಲ್ ಅರ್ಜಿಗೆ ಹಿನ್ನಡೆ
ಇದೇ ವೇಳೆ, ಚುನಾವಣಾ ಆಯೋಗದ ನಿರ್ಧಾರಗಳನ್ನು ಪ್ರಶ್ನಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಒಕ್ಕೂಟದ ಇತರ 9 ನಾಯಕರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಬರೋಬ್ಬರಿ 14 ತಾಂತ್ರಿಕ ಲೋಪದೋಷಗಳನ್ನು ಪತ್ತೆಹಚ್ಚಿ ಪ್ರತ್ಯೇಕಿಸಿದೆ. ವಿಪಕ್ಷಗಳ ನ್ಯಾಯಾಂಗ ಹೋರಾಟಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.



