November 13, 2026
Friday, November 13, 2026
spot_img

ಮುಂಡಗೋಡ ತಾಲೂಕಿನಲ್ಲಿ ಕಾಡಾನೆ ಹಾವಳಿ: ರಾಮಪುರ ಗ್ರಾಮದ ಭತ್ತದ ಗದ್ದೆಗೆ ಒಂಟಿ ಸಲಗ ದಾಳಿ, ಬೆಳೆ ನಾಶ

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಕಾತೂರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಅರಣ್ಯದಂಚಿನಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಘಟನೆಗಳು ನಿತ್ಯದ ಗೋಳಾಗಿ ಪರಿಣಮಿಸಿವೆ. ಇದೀಗ ರಾಮಪುರ ಗ್ರಾಮದ ರೈತರೊಬ್ಬರ ಭತ್ತದ ಗದ್ದೆಗೆ ಒಂಟಿ ಸಲಗವೊಂದು ದಾಳಿ ನಡೆಸಿ ಬೆಳೆಯನ್ನು ನಾಶಪಡಿಸಿದೆ.

ರಾಮಪುರ ಗ್ರಾಮದ ರೈತ ಸುರೇಶ ತಿಪ್ಪಣ್ಣ ಇಂಗಳಿಕಿ ಎಂಬುವವರಿಗೆ ಸೇರಿದ ಭತ್ತದ ಗದ್ದೆಗೆ ನುಗ್ಗಿದ ಒಂಟಿ ಸಲಗ, ಫಸಲನ್ನು ಮನಬಂದಂತೆ ತಿಂದು ತುಳಿದು ಸಂಪೂರ್ಣ ಹಾನಿ ಮಾಡಿದೆ. ವರ್ಷಪೂರ್ತಿ ಕಷ್ಟಪಟ್ಟು, ಸಾಲಸೋಲ ಮಾಡಿ ಬೆಳೆಸಿದ್ದ ಭತ್ತದ ಬೆಳೆ ಕಣ್ಣೆದುರೇ ನಾಶವಾಗಿರುವುದನ್ನು ಕಂಡು ರೈತ ಸುರೇಶ ಅವರು ತೀವ್ರ ಆರ್ಥಿಕ ಸಂಕಷ್ಟ ಹಾಗೂ ಕಣ್ಣೀರಿಡುವಂತಾಗಿದೆ.

ಕಳೆದ ಕೆಲ ದಿನಗಳಿಂದ ಕಾತೂರ ವಲಯದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಒಂದೇ ಕಡೆ ಇರದೆ, ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಣೆಗೊಂಡು ಸಂಚರಿಸುತ್ತಿವೆ. ಹೀಗೆ ಬೇರ್ಪಟ್ಟ ಆನೆಗಳ ಗುಂಪುಗಳು ಹಾಗೂ ಒಂಟಿ ಸಲಗಗಳು ರಾತ್ರಿ ವೇಳೆ ಅರಣ್ಯದಂಚಿನ ಗ್ರಾಮಗಳ ರೈತರ ಗದ್ದೆಗಳಿಗೆ ಏಕಾಏಕಿ ಲಗ್ಗೆ ಇಡುತ್ತಿವೆ. ಕೈಗೆ ಬಂದ ಫಸಲನ್ನು ತಿಂದು ತುಳಿದು ಹಾಳು ಮಾಡುತ್ತಿರುವುದರಿಂದ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ.

ಇದನ್ನೂ ಓದಿ:

ಕಾಡಾನೆಗಳ ನಿರಂತರ ದಾಳಿಯಿಂದಾಗಿ ಅರಣ್ಯದಂಚಿನ ಗ್ರಾಮಗಳ ರೈತರು ಜಮೀನುಗಳಿಗೆ ತೆರಳಲು ಹಾಗೂ ರಾತ್ರಿ ವೇಳೆ ಬೆಳೆ ಕಾಯಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಕೇವಲ ಬೆಳೆ ನಷ್ಟವಷ್ಟೇ ಅಲ್ಲದೆ, ಪ್ರಾಣಭಯವೂ ರೈತರನ್ನು ಕಾಡುತ್ತಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಬೇಕು ಮತ್ತು ಸೂಕ್ತ ಪರಿಹಾರ ಒದಗಿಸಬೇಕು. ಅಲ್ಲದೆ, ಕಾತೂರ ವಲಯದಲ್ಲಿ ಗುಂಪು ಗುಂಪಾಗಿ ಸಂಚರಿಸುತ್ತಿರುವ ಕಾಡಾನೆಗಳನ್ನು ಕಾಡಿನೊಳಗೆ ಅಟ್ಟಲು ಅರಣ್ಯ ಇಲಾಖೆ ತುರ್ತು ಕಾರ್ಯಾಚರಣೆ ಕೈಗೊಂಡು ರೈತರ ಬೆಳೆ ಹಾಗೂ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

Skip to toolbar