ಇನ್ಮುಂದೆ ಪ್ರಾಥಮಿಕ ಶಾಲಾ ಹಂತದಿಂದಲೇ ಸ್ಪೋಕನ್ ಇಂಗ್ಲೀಷ್ ಕಲಿಕೆ: ಸಚಿವ ನಾಗೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಸರ್ಕಾರಿ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ‘ಸ್ಪೋಕನ್ ಇಂಗ್ಲಿಷ್​’ ಕಲಿಸಲಾಗುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, .ಹೋಬಳಿ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಬಳಿಕ ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷೆ ಮತ್ತು ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರುವಂತಹ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಇಂಗ್ಲಿಷ್​ ಕಲಿಕೆ ಹಾಗೂ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್​ ಕಲಿಸಿಕೊಡಲಾಗುತ್ತದೆ. ಅಲ್ಲದೆ ಈ ಸಲಹೆಯನ್ನು ಇ ಸಾಹಿತಿ ಎಸ್.ಎಲ್. ಭೈರಪ್ಪ ಅವರೂ ನೀಡಿದ್ದು, ಅದನ್ನು ಸ್ವೀಕರಿಸಲಾಗುತ್ತೆ ಎಂದು ತಿಳಿಸಿದರು.
ಪ್ರಸುತ್ತ ಖಾಸಗಿ ಶಾಲೆಗಳು ಮತ್ತು ಇಂಗ್ಲಿಷ್​ ಮಾಧ್ಯಮ ಶಿಕ್ಷಣದ ವ್ಯಾಮೋಹ ಜನರಲ್ಲಿ ಹೆಚ್ಚಿದೆ. ಯಾವುದೇ ಗುಣಮಟ್ಟ ಇರಲಿ ಮಕ್ಕಳಿಗೆ ಇಂಗ್ಲಿಷ್​ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ಹೀಗಾಗಿ, ಮಾದರಿ ಶಾಲೆಗಳಲ್ಲಿ ಇಂಗ್ಲಿಷ್​ ಸ್ಪೋಕನ್ ಇಂಗ್ಲಿಷ್​ ಆಗಿ ಕಲಿಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದರು.
ಅದೇ ರೀತಿ ಪ್ರಾಥಮಿಕ ಶಾಲಾ ಹಂತದಿಂದಲೇ ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳ ಪಠ್ಯ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ಹಾಳೆಯ ಒಂದು ಬದಿ ಕನ್ನಡ ಇದ್ದರೆ, ಮತ್ತೊಂದು ಬದಿ ಇಂಗ್ಲಿಷ್​ನಲ್ಲಿ ಮುದ್ರಿಸಲಾಗುತ್ತಿದೆ. 1ರಿಂದ 4ನೇ ತರಗತಿವರೆಗೆ ಈ ಎರಡು ವಿಷಯಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತದೆ ಎಂದರು.
ಪ್ರತಿ ವರ್ಷ ಒಂದೊಂದು ತರಗತಿಯಂತೆ 1ರಿಂದ 3ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಮುದ್ರಿಸಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಿಂದ 1ರಿಂದ4ನೇ ತರಗತಿವರೆಗೆ ಮುದ್ರಿಸಲಾಗುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದಲೇ ಕನ್ನಡದ ಜೊತೆಗೆ ಇಂಗ್ಲಿಷ್​ ಭಾಷೆಯ ಪರಿಚಯ ಆಗಬೇಕು ಎನ್ನುವ ಉದ್ದೇಶವಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್‌.ಎಲ್. ಭೈರಪ್ಪ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್​ ಜೋಶಿ, ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!