Sunday, December 10, 2023

Latest Posts

ಮಠದ ಭೂಮಿ ಹಿಂತಿರುಗಿಸದಿದ್ದಲ್ಲಿ ಕಾನೂನು ಕ್ರಮ : ಬ್ರಹನ್ಮಠದ ಆಡಳಿತಾಧಿಕಾರಿ ರೇಖಾ

ಹೊಸದಿಗಂತ ವರದಿ ಸೋಮವಾರಪೇಟೆ:

ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರು ಭೂಮಿಯನ್ನು ಮಠಕ್ಕೆ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿ ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶೆ ರೇಖಾ‌ ಅವರು ಎಚ್ಚರಿಸಿದ್ದಾರೆ.

ಇಲ್ಲಿಗೆ ಸಮೀಪದ ಬೇಳೂರು ಗ್ರಾಮದಲ್ಲಿ ಚಿತ್ರದುರ್ಗ ಬ್ರಹನ್ಮಠಕ್ಕೆ ಸೇರಿದ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಮಠ ಹಾಗೂ ಮಠಕ್ಕೆ ಸೇರಿದ ಆಸ್ತಿಯ ಕುಂದುಕೊರತೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ಹಿಂದೆ ಕೊಡಗಿನ ಅರಸರು ಮಠಕ್ಕೆ ನೀಡಿರುವ ಆಸ್ತಿ ಇದಾಗಿದ್ದು, ಇದು ಸಾರ್ವಜನಿಕ ಆಸ್ತಿ. ಇದು ಯಾರದೇ ವೈಯಕ್ತಿಕ ಸೊತ್ತಾಗಲು ಸಾಧ್ಯವಿಲ್ಲವೆಂದು ತಿಳಿಸಿದರು.

ಬೃಹನ್ಮಠದ ಆಸ್ತಿಯನ್ನು ಸಂರಕ್ಷಿಸಲು ಹಾಗೂ ಕಾನೂನು ಹೋರಾಟ ನಡೆಸಲು ಹಿರಿಯ ಹಾಗೂ ಅನುಭವಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಮಠದ ಆಸ್ತಿ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೆಂಪು, ಹಳದಿ ಹಾಗೂ ಹಸಿರು ವಲಯಗಳನ್ನಾಗಿ ವಿಭಜಿಸಿ ಕಾನೂನು ಘಟಕ ಕ್ರಮಕೈಗೊಳ್ಳಲು ಸಿದ್ದವಾಗಿದೆ. ಆದ್ದರಿಂದ ಅಕ್ರಮವಾಗಿ ಮಠದ ಆಸ್ತಿಯನ್ನು ಬಳಸಿಕೊಳ್ಳುತ್ತಿರುವವರು ತಾವಾಗಿಯೇ ಹಿಂತಿರುಗಿಸಿದರೆ ಒಳ್ಳೆಯದು ಎಂದು ತಿಳಿಸಿದರು.

ಮಠದ ಆಸ್ತಿ, ಮರಗಳ ಹನನ ಸೇರಿದಂತೆ ಇನ್ನಿತರೆ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಮಠಗಳಲ್ಲಿ ದಾಸೋಹಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಆದರೆ ಇಲ್ಲಿ ಅದಾವುದೂ ನಡೆಯುತ್ತಿಲ್ಲ. ಆದ್ದರಿಂದ ನಾಳೆಯಿಂದಲೇ ಬೇಳೂರು ಮಠದಲ್ಲಿ ದಾಸೋಹ ಆರಂಭಿಸಲು ವ್ಯವಸ್ಥಾಪಕ ಶಶಿಧರ್ ಅವರಿಗೆ ಆದೇಶಿಸಿದರು.

ಬೇಳೂರು ಮಠ, ಅಭಿಮಠ, ಗುತ್ತಿ ಮಠ, ಸೋಮವಾರಪೇಟೆ ವಿರಕ್ತ ಮಠ ಹಾಗೂ ಚಂಗಡ ಹಳ್ಳಿ ಮಠಗಳ ಅಭಿವೃದ್ಧಿಯೊಂದಿಗೆ ಎಲ್ಲಾ ಮಠಗಳಿಗೂ ಸ್ವಾಮೀಜಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಈ ಸಂದರ್ಭ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಸಾಂಬಾಶಿವಾಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್, ತಾಲೂಕು ಅಧ್ಯಕ್ಷ ಹಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಗ್ರಾಮಸ್ಥ ಪ್ರಜ್ವಲ್, ವೀರಶೈವ ಮುಖಂಡರಾದ ಶಾಂತವೇರಿ ವಸಂತ್, ಚಂಗಡಹಳ್ಳಿಯ ಹಾಲಪ್ಪ, ಸಂತೋಷ್ ಕೊಡ್ಲಿಪೇಟೆ ನಿರ್ಮಲಾ ನಾಗರಾಜ್ ಅವರುಗಳು ಮಾತನಾಡಿ ಕೊಡಗಿನ ಅರಸರು ಸುಮಾರು 3000 ಎಕರೆಗಳಿಗಿಂತ ಹೆಚ್ಚಿನ ಭೂಮಿಯನ್ನು ಮುರುಘಾ ಮಠಕ್ಕೆ ನೀಡಿದ್ದರೆಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತ 550 ಎಕರೆಗೆ ಬಂದು ನಿಂತಿದೆ. ಉಳಿದ ಭೂಮಿ ಎಲ್ಲಿಗೆ ಹೋಯಿತು? ಇಂದು ಬಹುತೇಕ ಭೂಮಿ ಅಕ್ರಮವಾಗಿ ಬಳಕೆಯಾಗುತ್ತಿದೆ. ಅವುಗಳನ್ನು ವಾಪಸ್ ಪಡೆಯಬೇಕು ಅದು ಸಮಾಜದ ಆಸ್ತಿಯಾಗಿ ಉಳಿಯಬೇಕೆಂದು ಹೇಳಿದರು.

ವ್ಯವಸ್ಥಾಪಕರ ವಿರುದ್ಧ ನೇರ ಆರೋಪ: ಈ ಹಿಂದೆ ಸಾನಂದಕುಮಾರ್ ಎಂಬವರು ವ್ಯವಸ್ಥಾಪಕರಾಗಿದ್ದ ಸಂದರ್ಭ ಮಠದ ಹೆಸರಿನಲ್ಲಿದ್ದ ಜಮೀನಿಗೆ ಸುತ್ತ ಬೇಲಿ ಹಾಕಿ ತೋಟ ಮಾಡಿದ್ದರು. ಆದರೆ ಇಂದು ಕೆಲವು ಜಾಗ ಪಾಳುಬಿದ್ದು ಕಾಡಾಗಿದ್ದರೆ, ಮತ್ತೆ ಕೆಲವು ಅನ್ಯರ ಪಾಲಾಗಿದೆ ಎಂದರು. ಈಗಿರುವ ವ್ಯವಸ್ಥಾಪಕರು ಹಲವರಿಗೆ ತೋಟ ಮಾಡಲು ಕೊಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ತೋಟದ ಒಳಗೆ ಇದ್ದ ಮರಗಳನ್ನು ಕಡಿದು ಮಾರಲಾಗಿದೆ. ಇದರ ಹಣ ಮಠಕ್ಕೆ ಸೇರಿದೆಯೇ ಎಂದು ಪ್ರಶ್ನಿಸಿದರು. 200 ಎಕರೆ ತೋಟವನ್ನು ಹೊರ ರಾಜ್ಯದ ವ್ಯಕ್ತಿಗಳಿಗೆ ಅತ್ಯಂತ ಕಡಿಮೆ ಹಣಕ್ಕೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಇದು ಹೆಸರಿಗಷ್ಟೇ ಮಠ. ಇಲ್ಲಿ ಹಸಿದು ಬರುವವರಿಗೆ ಅನ್ನ ಹಾಕಲಾರದಷ್ಟು ಹಾಳು ಬಿದ್ದಿದೆ. ಇಲ್ಲಿನ ಮಠಗಳಿಗೆ ಸ್ವಾಮೀಜಿಗಳು ಇಲ್ಲದೆ ಧಾರ್ಮಿಕ ಚಟುವಟಿಕೆಗಳು ನಡೆಯದೆ ಪಾಳು ಬಿದ್ದಿವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತಾಧಿಕಾರಿಗಳು, ವ್ಯವಸ್ಥಾಪಕ ಶಶಿಧರ್’ಗೆ ಎಚ್ಚರಿಕೆ ನೀಡಿ, ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿ ನಡೆಯಬೇಕು. ಈಗ ಒಂದು ಅವಕಾಶ ನೀಡೋಣ. ಮುಂದೆ ಹೀಗಾದರೆ ಕ್ರಮ ಅನಿವಾರ್ಯ ಎಂದರಲ್ಲದೆ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿ, ನಿಮ್ಮೆಲ್ಲಾ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಬೃಹನ್ಮಠದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ
ವಿಜಯಾ, ಕಾನೂನು ಸಲಹೆಗಾರ ಹಿರಿಯ ವಕೀಲ ವಿಶ್ವನಾಥ, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ವೇದಿಕೆಯಲ್ಲಿದ್ದರು.

ಬೇಳೂರು, ಶನಿವಾರಸಂತೆ, ಕೊಡ್ಲಿಪೇಟೆ, ಚಂಗಡ ಹಳ್ಳಿ ಸುತ್ತಮುತ್ತಲ ಕೆಲವು ಗ್ರಾಮಸ್ಥರು ಮತ್ತು ವೀರಶೈವ ಮುಖಂಡರು ಹಾಜರಿದ್ದ ಸಂದರ್ಭ ಮಠದ ಆವರಣದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!