ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಸರ್ಕಾರದಿಂದ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಈ ಕುರಿತು ಪ್ರಕಟನೆ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲೂ ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಇವುಗಳನ್ನು ವಿಕ್ಷೀಸಲು ಬರುವಂತಹ ಸಾರ್ವಜನಿಕರು- ಪ್ರವಾಸಿಗರು ಸೌಂದರ್ಯಕ್ಕೆ ಮನಸೋತು ಬಹಳ ಹತ್ತಿರದಿಂದ ಫೋಟೋ ಅಥವಾ ವಿಡಿಯೋ ತೆಗೆಯುವ, ರೀಲ್ಸ್ ಮಾಡುವ ಅನಗತ್ಯ ಸಾಹಸ ಮಾಡದಿರುವಂತೆ ಅವರು ಸಲಹೆ ಮಾಡಿದ್ದಾರೆ.
ಮಳೆಗಾಲವಾಗಿರುವುದರಿಂದ ಕಲ್ಲು ಬಂಡೆಗಳು ಒದ್ದೆಯಾಗಿ ಜಾರುತ್ತಿರುತ್ತದೆ. ಪ್ರವಾಸಿಗರಿಗೆ ಹೊಸ ಪ್ರದೇಶದಲ್ಲಿ ಅಲ್ಲಿನ ಪರಿಸರದ ಬಗ್ಗೆ ಅರಿವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರ ಮಾತುಗಳನ್ನು ಗೌರವಿಸಿ, ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳ ಅನುಸರಿಸಬೇಕು, ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನೂ ಸಹ ನಿಯೋಜಿಸಲಾಗಿದೆ. ಆದರೂ ಸಹ ಪ್ರವಾಸಿ ತಾಣಗಳಲ್ಲಿ ನೀಡಿರುವ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ಪ್ರವಾಸಿಗರು ತಮ್ಮ ಅಮೂಲ್ಯ ಜೀವವನ್ನು ಹಾನಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕದಿರುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದ್ದಾರೆ. ಒಂದು ಸಣ್ಣ ತಪ್ಪು ನಡೆ ಜೀವಕ್ಕೆ ಎರವಾದೀತು ಎಂಬುದನ್ನು ಪ್ರವಾಸಿಗರು ಮನಗಂಡು ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಹೋಟೆಲ್, ಹೋಂ-ಸ್ಟೇ, ರೆಸಾರ್ಟ್‌ಗಳಲ್ಲಿ ತಂಗುವ ಸಾರ್ವಜನಿಕರಿಗೆ/ಪ್ರವಾಸಿಗರಿಗೆ ಮಾಲಕರು ಅಥವಾ ಸಿಬ್ಬಂದಿಗಳು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಜಾಗೃತಿ ಹಾಗೂ ಸುರಕ್ಷತೆಯಿಂದ ಇರುವ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಪ್ರವಾಸಿಗರು ಸರ್ಕಾರದಿಂದ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಪ್ರವಾಸಿಗರ ಮೇಲೆ ನಿಯಮಾನುಸಾರ ಕಾನೂನು ಕ್ರಮಬಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ವೆಂಕಟ್ ರಾಜಾ ಅವರು ಎಚ್ಚರಿಸಿದ್ದಾರೆ