ಹೊಸದಿಗಂತ ವರದಿ ಬೆಳಗಾವಿ:
ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದರೆ ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಸರಕಾರದಲ್ಲಿ ನಿಯಮಾವಳಿ ಇಲ್ಲ. ಹೀಗಾಗಿ ಒಂದು ವೇಳೆ ಸ್ಥಾನಮಾನ ಕೊಟ್ಟಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಎಂದರು.
ಸಚಿವ ಸ್ಥಾನ ಸಿಗದ ಶಾಸಕರನ್ನು ಸಮಾಧಾನಗೊಳಿಸಲು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲು ತಯಾರಿ ನಡೆದಿದೆ. ಇದನ್ನು ನ್ಯಾಯಾಲಯದಲ್ಲಿ ಪಿಐಎಲ್ ಮೂಲಕ ಪ್ರಶ್ನಿಸುವುದಾಗಿ ಹೇಳಿದರು.
ಸರಕಾರದ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಮೇತ ಪತ್ರ ಬರೆಯಲಾಗಿದೆ. ಸಂಪುಟ ಸ್ಥಾನಮಾನ ಬಗ್ಗೆ ನಿಯಮಾವಳಿಗಳಾಗಲಿ, ಸುತ್ತೋಲೆಗಳಾಗಲಿ ಶಿಷ್ಟಾಚಾರ ಇಲಾಖೆಯಲ್ಲಿ ಲಭ್ಯ ಇರುವುದಿಲ್ಲ. ಹೀಗಾಗಿ ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಕುರಿತು ಮಾಹಿತಿ ಲಭ್ಯವಾಗದೇ ಇರುವ ದಾಖಲೆಗಳನ್ನು ಪತ್ರದೊಂದಿಗೆ ಸರ್ಕಾರಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.