September 17, 2026
Thursday, September 17, 2026
spot_img

ಲೆಜೆಂಡರಿ ನಟನಿಗೆ ಸಿಕ್ತು ತಕ್ಕ ಗೌರವ: ‘ಸರ್ಕಾರಿ ಹಿ.ಪ್ರಾ. ಶಾಲೆ’ ಕ್ಷಣಗಳನ್ನು ನೆನೆದು ರಿಷಬ್ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಹೆಮ್ಮೆಯ ಹಿರಿಯ ನಟ, ‘ಪದ್ಮಭೂಷಣ’ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದು ಬಂದಿದೆ. ಇಡೀ ಕನ್ನಡ ಚಿತ್ರರಂಗವೇ ಕೊಂಡಾಡುವ ಈ ಮಹಾನ್ ಕಲಾತಪಸ್ಸಿಗೆ ದೇಶದ ಅತ್ಯುನ್ನತ ಗೌರವ ಸಿಕ್ಕಿರುವುದಕ್ಕೆ ಕರುನಾಡಿನಾದ್ಯಂತ ಸಂಭ್ರಮ ಮುಗಿಲುಮುಟ್ಟಿದೆ.

ಈ ಶುಭ ಘಳಿಗೆಯಲ್ಲಿ ‘ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದ ಕ್ಷಣಗಳನ್ನು ನೆನೆದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಾವುಕರಾಗಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

“ಅನಂತ್ ನಾಗ್ ಸರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರೋದು ನಮಗೆಲ್ಲಾ ತೀರಾ ಲೇಟಾಗಿ ಸಿಕ್ಕ ನ್ಯಾಯ ಅನ್ನಿಸ್ತಿದೆ. ಕೇವಲ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ನಟ ಅವರು. ‘ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇ ನನ್ನ ದೊಡ್ಡ ಭಾಗ್ಯ. ಅನಂತ್ ಸರ್ ಬರೀ ನಟ ಅಷ್ಟೇ ಅಲ್ಲ, ಅವರೊಂದು ನಡೆಯುವ ಅಭಿನಯ ಶಾಲೆ.” ಎಂದು ನುಡಿದಿದ್ದಾರೆ.

ಅಷ್ಟೇ ಅಲ್ಲ, ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂಥ ದಿಗ್ಗಜರ ನಂತರ, ನಮ್ಮ ಕನ್ನಡ ಚಿತ್ರರಂಗಕ್ಕೆ ಮಾರ್ಗದರ್ಶಕರಾಗಿ, ನಮಗೆಲ್ಲರಿಗೂ ಬೆನ್ನೆಲುಬಾಗಿ ನಿಂತಿರೋ ಹಿರಿಯ ಜೀವಿ ಅಂದ್ರೆ ಅದು ಅನಂತ್ ಸರ್. ದೇವರು ಅವರಿಗೆ ಇನ್ನಷ್ಟು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ಅವರ ನಟನೆಯನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡೋಕೆ ನಾವು, ನಮ್ಮಂತ ಕೋಟಿ ಕೋಟಿ ಅಭಿಮಾನಿಗಳು ಕಾಯ್ತಿದ್ದೀವಿ,” ಎಂದು ರಿಷಬ್ ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಡಾ. ರಾಜಕುಮಾರ್ ನಂತರ ಕನ್ನಡ ಚಿತ್ರರಂಗದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಮಹಾನ್ ಕಲಾವಿದ ಅನಂತ್ ನಾಗ್. ಈ ಗೌರವದಿಂದ ಇಡೀ ಕನ್ನಡ ನಾಡಿನ ಮಕುಟಕ್ಕೆ ಮತ್ತೊಂದು ಗರಿ ತೊಡಿಸಿದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !