ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಪೆರ್ಮುದೆ ತೆಂಕ ಎಕ್ಕಾರ್‌ನಲ್ಲಿ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಕೆಲ ದಿನಗಳ ಹಿಂದಷ್ಟೇ ಚಿರತೆ ನಾಯಿಗಳ ಮೇಲೆ ದಾಳಿ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದರು. ಇದೀಗ ಮತ್ತೆ ಚಿರತೆ ಕರುಗಳ ಮೇಲೆ ದಾಳಿ ಮಾಡಿದೆ.
ಚಿರತೆ ದಾಳಿಯಿಂದ ಕರು ಗಾಯಗೊಂಡಿದೆ. ಮಂಗಗಳು, ಹಾಗೂ ನಾಯಿ ಬೊಗಳುವ ಸದ್ದಿಗೆ ರೈತ ಪಾಸ್ಕಲ್ ಅವರು ಮನೆಯಿಂದ ಹೊರಗೆ ಓಡಿಬಂದಿದ್ದು, ಚಿರತೆ ಅಲ್ಲಿಂದ ಓಡಿಹೋಗಿದೆ.
ಈವರೆಗೆ ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗಳು ಇದೀಗ ಮನೆಯ ಬಳಿಯೇ ಇರುವ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಗುಡ್ಡ ಕಾಡು ಹಾಗೂ ಕೃಷಿ ತೋಟ ಪ್ರದೇಶವಾದ ಪೆರ್ಮುದೆ ತೆಂಕ ಎಕ್ಕಾರು ಜನತೆ ಚಿರತೆ ದಾಳಿಯಿಂದ ಭಯಭೀತರಾಗಿದ್ದಾರೆ.
ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಲು ಹೆದರುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಹಾನಿಯಾಗುವ ಮುನ್ನವೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.