Saturday, September 23, 2023

Latest Posts

ದಮ್ಮಿದ್ದರೆ ಕಾಂಗ್ರೆಸಿಗರು ಹಿಂದುಗಳ ಮತ ಬೇಡ ಎಂದು ಹೇಳಲಿ: ನಳಿನ್ ಸವಾಲು

ಹೊಸದಿಗಂತ ವರದಿ,ಶಿವಮೊಗ್ಗ:

ಅಲ್ಪಸಂಖ್ಯಾತರನ್ನು ನಿರಂತರವಾಗಿ ಓಲೈಸುತ್ತಿರುವ ಕಾಂಗ್ರೆಸಿಗರು ದಮ್ಮಿದ್ದರೆ ಹಿಂದುಗಳ ಮತ ಬೇಡ ಎಂದು ಹೇಳಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸವಾಲು ಹಾಕಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾರೋಪದಲ್ಲಿ ಪಾಲ್ಗೊಳಲು ಬುಧವಾರ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕಾರ ಇಲ್ಲದಿದ್ದಾಗ ಕಾಂಗ್ರೆಸ್ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನೆ ಅನುಸರಿಸುತ್ತಿದೆ. ಈಗಲೂ ಕೂಡ ಮತಾಂತರ ‌ನಿಷೇಧ ಕಾಯಿದೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.
ಬಿಜೆಪಿ ರಾಜ್ಯದಲ್ಲಿ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಿ ಬೆಳೆಯುತ್ತಿದೆ. ಇದನ್ನು ಸಹಿಸಲು ಕಾಂಗ್ರೆಸ್ ಗೆ‌ ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ ಏನಾದರೊಂದು ಕಿರಿಕ್ ಮಾಡಲು‌ ಮುಂದಾಗಿದೆ. ಹಿಂದೆ ಸಿದ್ದರಾಮಯ್ಯನವರು ಶಾದಿ ಭಾಗ್ಯ, ಟಿಪ್ಪು ಜಯಂತಿ ಮಾಡಿ ಒಂದು ಸಮುದಾಯ ಓಲೈಕೆ ಮಾಡಿದ್ದರು. ಇದನ್ನು ಮಾಡಬೇಕೆಂದು ಯಾರೂ ಕೇಳಿರಲಿಲ್ಲ ಎಂದರು.
ಮೇಕೆ ದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಒಂದೇ ಒಂದು ಸಭೆ ಮಾಡಿರಲಿಲ್ಲ. ಆದರೆ ಈಗ ಪಾದಯಾತ್ರೆ ನಡೆಸಲು ಮುಂದಾಗಿದೆ ಎಂದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾನೂನು ತೊಡಕು ಪರಿಹರಿಸಲು ಯತ್ನಿಸುತ್ತಿದ್ದಾರೆ. ಇಷ್ಟರಲ್ಲಿಯೇ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಎಂದರು.
ಯಾವುದೇ ರಾಜಕೀಯ ಪಕ್ಷಗಳು ಕಾರ್ಯಕ್ರಮ ಮಾಡುತ್ತವೆ ಎಂಬ ಉದ್ದೇಶದಿಂದ ಲಾಕ್ ಡೌನ್ ಮಾಡಿಲ್ಲ. ಡಬ್ಲು ಎಚ್ ಓ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕೆಯಿಂದ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!