ಹೊಸದಿಗಂತ ವರದಿ,ರಾಯಚೂರು:
ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಇರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲುಪೆನ್ ಡ್ರೈವ್ ಬಿಡುಗಡೆ ಮಾಡಲಿ, ನಂತರ ತನಿಖೆ ನಡೆಯಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ ಹೇಳಿದರು.
ಭಾನುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಂತ್ರಿಗಳು ಪ್ರತಿಪಕ್ಷಗಳಿಗೆ ಯಾಕೆ ಉತ್ತರ ನೀಡಬೇಕು. ಜನರೇ ಅವರಿಗೆ ಉತ್ತರ ನೀಡುತ್ತಾರೆ. ಕುಮಾರಸ್ವಾಮಿ ಅವರು ಹೇಳಿದ್ದನ್ನೇ ಹೇಳಿ ನಿರಂತರವಾಗಿ ಆರೋಪ ಮಾಡುತ್ತಿರುತ್ತಾರೆ ಎಂದರು.
ಎಚ್.ಡಿ.ಕೆ ಹೇಳಿಕೆಗಳಿಗೆ ನಾವು ಉತ್ತರ ನೀಡುತ್ತಾ ಹೋದರೆ, ಬೆಲೆ ಇರುವುದಿಲ್ಲ. ಬಿಡಿಎ ಮತ್ತು ನೈಸ್ ರಸ್ತೆ ಹಗರಣದ ವಿಷಯ ಕುರಿತು ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಇದ್ದರೆ ಸಲ್ಲಿಸಲಿ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ಸಚಿವರು ಹೊಸ ಸರ್ಕಾರ ಬಂದಾಗ ಹೊಸ ಶಾಸಕರು, ಸಾರ್ವಜನಿಕರ ಹೊಸ ಕೆಲಸ-ಕಾರ್ಯಗಳ ಬಗ್ಗೆ ಅಪೇಕ್ಷೆಗಳಿರುತ್ತವೆ ಅವುಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಆ ನಿಟ್ಟಿನಲ್ಲಿಯೇ ಮುಖ್ಯಮಂತ್ರಿಗಳು ಶಾಸಕರ ಜೊತೆಗೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕಾಂಗ ಸಭೆಯಲ್ಲಿ ಜನರ ಹಾಗೂ ಜನಪ್ರತಿನಿಧಿಗಳ ಕೆಲಸಗಳು ಸಾಗಲಿ ಎನ್ನುವ ದೃಷ್ಠಿಯಿಂದ ಸಭೆ ನಡೆಸಲಾಗುತ್ತಿದೆ ಹೊರತು ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಅಸಮಧಾನವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ನಗರಗಳಲ್ಲಿ ಕುಡಿಯುವ ನೀರಿಗೆ ೯೨ ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಆ ಅನುದಾನವನ್ನು ಬಳಕೆ ಕುರಿತು ಮುಖ್ಯಮಂತ್ರಿಗಳ ತೀರ್ಮಾನ ತೆಗೆದು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.