ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣಕ್ಕೆ ರಾಜ್ಯ ಸರಕಾರ ಹರಸಾಹಸ ಪಡೆಯುತ್ತಿದ್ದು, ಇದರ ನಡುವೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಗೆ ಮತ್ತೊಂದು ಶಾಕ್ ಎದುರಾಗಿದೆ.
ಸದ್ಯ ಮಣಿಪುರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸತತ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಇದೀಗ ರಾಜಕೀಯ ಅಸ್ಥಿರತೆ ಎದುರಾಗಿದೆ. ಬಿರೇನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷ ವಾಪಸ್ ಪಡೆದಿದೆ.
ಮಣಿಪುರ ಸರ್ಕಾರ ಹಿಂಸಾಚಾರ ನಿಯಂತ್ರಿಸಲು ಸಂಪೂರ್ಣ ವಿಫಲಗೊಂಡಿದೆ. ಸಮುದಾಯಗಳ ನಡುವೆ ಸೌಹಾರ್ಧತೆ ಬೆಳೆಸುವಲ್ಲಿ ವಿಫಲವಾಗಿದೆ ಎಂದು ಕೆಪಿಎ ಪಕ್ಷ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಕುರಿತು ಮಣಿಪುರ ರಾಜ್ಯಪಾಲರಿಗೆ ಪತ್ರ ಬರೆದಿರುವ ಕೆಪಿಎ ಪಕ್ಷ, ಹಲವು ಸುತ್ತಿನ ಮಾತುಕತೆ, ಚರ್ಚೆ ಬಳಿಕ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ.
ಮಣಿಪುರದ ಪ್ರಸಕ್ತ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್ ಅಲಯನ್ಸ್ ಪಕ್ಷ ವಾಪಸ್ ಪಡೆಯುತ್ತಿದೆ. ಇನ್ನು ಮುಂದೆ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೆಪಿಎ ಪಕ್ಷ ಭಾಗವಾಗಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಕೆಪಿಎ ಪಕ್ಷದ ಅಧ್ಯಕ್ಷ ತೊಂಗ್‌ಮಾಂಗ್ ಹಾವೋಕಿಪ್ ಸಹಿ ಮಾಡಿರುವ ಈ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ.
2022ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಎ ಪಕ್ಷ 2 ಸ್ಥಾನ ಗೆದ್ದಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ 32 ಸ್ಥಾನ ಗೆದ್ದಿದೆ. ಇನ್ನು ಐವರು ಎನ್‌ಪಿಎಫ್ ಪಕ್ಷದ ಶಾಸಕರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲ ಬಿಜೆಪಿ ಸರ್ಕಾರಕ್ಕಿದೆ.