ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಾಮಾಣಿಕತೆ ಅರಿತು ಮಾತನಾಡಲಿ: ಎನ್.ರವಿಕುಮಾರ್ ತಿರುಗೇಟು

ಹೊಸದಿಗಂತ ವರದಿ, ಚಿತ್ರದುರ್ಗ:

ಚುನಾವಣಾ ಬಾಂಡ್ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರು ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಪ್ರಾಮಾಣಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ತಿರುಗೇಟು ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ರೌಡಿಸಂ ಮೂಲಕ ಬೆದರಿಕೆ ಹಾಕಿ ಹಣ ಸಂಗ್ರಹಣೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳಿಗೆ ಬಂದಿರುವ ಚುನಾವಣಾ ಬಾಂಡ್ ಹಣದ ಬಗ್ಗೆ ಉತ್ತರಿಸಲಿ. ಯಾವ ಪಕ್ಷಕ್ಕೆ ಎಷ್ಟೆಷ್ಟು ಹಣ ದೇಣಿಗೆ ಬಂದಿದೆ ಎಂಬುದು ನರೇಂದ್ರ ಮೋದಿಯವರ ಕಾಲದಲ್ಲಿ ತಿಳಿದಿದೆ. ಇದು ಅವರ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಅಕ್ರಮವಾಗಿ ಹಣ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅದರಂತೆ ಕಾಂಗ್ರೆಸ್‌ಗೆ ೪೫೦೦ ಕೋಟಿ ಹಣ ಸಂಗ್ರಹವಾಗಿದೆ. ಬೇರೆ ಬೇರೆ ಪಕ್ಷಗಳಿಗೆ ಎಷ್ಟೆಷ್ಟು ಹಣ ಬಂದಿದೆ. ಮನಮೋಹನ್‌ಸಿಂಗ್ ಕಾಲದಲ್ಲಿ ಕಾಂಗ್ರೆಸ್‌ಗೆ ಎಷ್ಟು ಹಣ ಬಂದಿದೆ ಎಂದು ತಿಳಿಸಲಿ. ಅಲ್ಲದೇ ಯುಪಿಎ ಸರ್ಕಾರದ ಅವಧಿಯಲ್ಲಿ ೨-ಜಿ ಹಗರಣ, ಕಲ್ಲಿದ್ದಲು ಹಗರಣ, ಆದರ್ಶ ಹೌಸಿಂಗ್ ಹಗರಣ, ಹೆಲಿಕ್ಯಾಪ್ಟರ್, ಕಲ್ಲಿದ್ದಲು ಹಗರಣದಲ್ಲಿ ೧೩ ಲಕ್ಷ ಕೋಟಿ ಹಣ ಅವ್ಯವಹಾರವಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ೪೦೦೦ ರೂ. ನಿಲ್ಲಿಸಲಾಗಿದೆ. ರೈತರ ಮಕ್ಕಳ ವಿದ್ಯಾರ್ಥಿ ವೇತನ, ಎಸ್‌ಸಿ, ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ನಿಲ್ಲಿಸಲಾಗಿದೆ. ಹಾಲಿನ ಪ್ರೋತ್ಸಾಹ ಧನ ನಿಲ್ಲಿಸಲಾಗಿದೆ. ರಾಜ್ಯದಲ್ಲಿ ೬೯೨ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಎಷ್ಟು ಜನರಿಗೆ ಪರಿಹಾರ ನೀಡಿದ್ದೀರಿ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸದೆ ಕೇವಲ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ. ಇದು ರೈತರ ಹತ್ಯೆ ಮಾಡುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಮೈ ಬ್ರದರ‍್ಸ್ ಪಾಲಿಸಿಯೇ ಬಾಂಬ್ ಸ್ಪೋಟಕ್ಕೆ ಕಾರಣ : ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಇದರಿಂದಾಗಿ ವಿಧಾನಸೌಧದಲ್ಲೇ ’ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಲಾಗುತ್ತಿದೆ. ಇದಕ್ಕೆ ಸಾಕ್ಷಿಯಾದ ಸಂಸದರು ಬಳ್ಳಾರಿಗೆ ಬಂದಾಗ ಸಾವಿರಾರು ಜನರು ಅವರನ್ನು ಸ್ವಾಗತಿಸುತ್ತಾರೆ. ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡುತ್ತಾರೆ. ಆದರೂ ಡಿಕೆಶಿ ಆ ಸಮುದಾಯದವರು ಮೈ ಬದ್ರರ‍್ಸ್ ಎನ್ನುತ್ತಾರೆ. ಈ ಮೈ ಬ್ರದರ‍್ಸ್ ಪಾಲಿಸಿಯೇ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ಗೆ ಕಾರಣ ಎಂದು ಕುಟುಕಿದರು.

ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿದೆ. ಆದರೆ ಕಾಂಗ್ರೆಸ್ ಮಾತ್ರ ಅದನ್ನು ವಿರೋಧಿಸುತ್ತಿದೆ. ಬರ ಪರಿಹಾರಕ್ಕಾಗಿ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್‌ಗೆ ರಿಟ್ ಹಾಕಿದೆ. ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನೆರೆ ಬಂತು. ಆಗ ಕೇಂದ್ರ ನೀಡುವ ಪರಿಹಾರದ ಹಣಕ್ಕೆ ಕಾಯಲಿಲ್ಲ. ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಿದರು. ಮನೆ ಕಳೆದುಕೊಂಡವರಿಗೆ ೯೦ ಸಾವಿರ ರೂ. ಬದಲಿಗೆ ೫ ಲಕ್ಷ ರೂ.ಗಳ ಪರಿಹಾರ ನೀಡಿದರು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎ.ಮುರುಳಿ, ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ಸಂಚಾಲಕರಾದ ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಮಾಧ್ಯಮ ವಿಭಾಗದ ಯಶವಂತ್, ಕಾರ್ಯಾಲಯ ಕಾರ್ಯದರ್ಶಿ ಶಂಭು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!