ಹೊಸದಿಗಂತ ವರದಿ,ಮೈಸೂರು :
ಮೈಸೂರಿನ ಪ್ರಿನ್ಸೆಸ್ ರಸ್ತೆಗಲ್ಲ, ಇಡೀ ಮೈಸೂರು ಸಿಟಿಗೆನೇ ಸಿಎಂ ಸಿದ್ದರಾಮಯ್ಯನವರ ನಗರ ಎಂದು ಹೆಸರಿಟ್ಟುಕೊಳ್ಳಲಿ ಎಂದು ಮಾಜಿ ಉಪಮುಖ್ಯಮಂತ್ರಿಯಾದ ಸಂಸದ ಗೋವಿಂದಕಾರಜೋಳ ಲೇವಡಿ ಮಾಡಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡಬೇಕೆಂದು ಕಾಂಗ್ರೆಸ್‌ನವರು ಪ್ರಯತ್ನ ಮಾಡುತ್ತಿದ್ದಾರೆ. ಆ ರಸ್ತೆ ಹೆಸರು ಬದಲಾಯಿಸುವ ಯತ್ನ ನಡೆಸುತ್ತಿದ್ದಾರೆ. ಇಡೀ ಮೈಸೂರು ಸಿಟಿಗೆ ಸಿದ್ದರಾಮಯ್ಯನವರ ಸಿಟಿ ಎಂದು ಹೆಸರಿಡಲಿ, ಬದಲಾವಣೆ ಮಾಡಲಿ, ಏನೂ ತಪ್ಪಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸ್ಪಷ್ಟವಾದ ಬಹುಮತ ಪಡೆದು ಅಧಿಕಾರಕ್ಕೆ ಬಂದ ದಿನದಿಂದಲೇ ಅಲ್ಲಿ ಸಿಎಂ ಕುರ್ಚಿಗಾಗಿ ಹೋರಾಟ ನಡೆಯುತ್ತಲೇ ಇದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೂ, ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುವುದಿಲ್ಲ. ಈಗ ಒಂದೆಡೆ ಚಲುವರಾಯಸ್ವಾಮಿ, ಮತ್ತೊಂದೆಡೆ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಮತ್ತಿತರರು ಸಿಎಂ ಕುರ್ಚಿಗಾಗಿ ಸಭೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ನಮ್ಮ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅಭಿವೃದ್ಧಿ ಕೆಲಸಗಳೂ ನಿಂತು ಹೋಗಿವೆ. ಸಚಿವರುಗಳು ಕಾನೂನು ಬಾಹಿರ ಕೆಲಸವನ್ನಾದರೂ ಮಾಡಿ, ನಮಗೆ ಹಣ ತಂದು ಕೊಡಿ ಎಂದು ಹೇಳಿ ಒತ್ತಡ ಹೇರುತ್ತಿರುವುದರಿಂದ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ.ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದರು.
ರಾಜ್ಯದಲ್ಲಿ ವಕ್ಫ್ ಬೋರ್ಡ್ ನಡೆಸಿರುವ ಆಸ್ತಿ ಕಬಳಿಕೆಯ ಕುರಿತು ಯಾರೇ ಮಾಹಿತಿ ಸಂಗ್ರಹಿಸಿ ತಂದು ಕೊಟ್ಟರೂ ಸ್ವಾಗತಿಸುತ್ತೇವೆ. ವಕ್ಫ್ ಬೋರ್ಡ್ ದೇವಸ್ಥಾನಗಳು, ಮಠ ಮಾನ್ಯಗಳ ಆಸ್ತಿ, ಪಾಸ್ತಿಗಳನ್ನೂ ತನ್ನದೆಂದು ಕಬಳಿಸುತ್ತಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ್ದ ದೇವಸ್ಥಾನಗಳು, ೧೨ ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಸಿಂದಗಿಯಲ್ಲಿ ನಿರ್ಮಿಸಿದ್ದ ವಿರಕ್ತ ಮಠವೂ ವಕ್ಫ್ ಆಸ್ತಿ ಎಂದು ಕಬಳಿಸುತ್ತಿದ್ದಾರೆ. ನಾನು ಈ ಬಗ್ಗೆ ರಚನೆಗೊಂಡಿದ್ದ ತನಿಖಾ ಸಮಿತಿಯ ಅಧ್ಯಕ್ಷನಾಗಿ, ತನಿಖೆ ಮಾಡಿ ವರದಿಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.