ಹೊಸದಿಗಂತ ವರದಿ, ರಾಯಚೂರು:
ರಾಜ್ಯ ಬರಗಾಲದಿಂದ ತಲ್ಲಣವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರ ಸಂಕಷ್ಟಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ರೈತರಿಗೆ ಸ್ಪಂದಿಸುತ್ತಿಲ್ಲ. ಇಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಲಿಂಗಸಗೂರು ಪಟ್ಟಣದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿಸದೆ ತನ್ನ ಪಾಲಿನ ಕರ್ತವ್ಯವನ್ನು ಅದು ನಿಭಾಯಿಸುವುದಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡಲಾರದಷ್ಟು ಭ್ರಷ್ಟಾಚಾರ ನಡೆಯುತ್ತಿರುವವುದನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಿಯಂತ್ರಿಸುವುದಕ್ಕೆ ಮುಂದಾಗುತ್ತಿಲ್ಲ. ಈಗಾಗಲೇ ಅನೇಕ ಭ್ರಷ್ಟಾಚಾರ ಹಗರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
ಕಲಾವಿದರಿಂದ ಲಂಚ ಪಡೆಯುವವರು ಇನ್ನು ಯಾರನ್ನು ಬಿಡುವರು. ಇದು ನಾಚಿಕೆಗೇಡಿ ಸಂಗತಿ. ಇಂತಹ ವಿಚಿತ್ರವಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂದು ಬೇಸರವ್ಯಕ್ತಪಡಿಸಿದರು.
ಮಳೆ ಅಭಾವದ ಹಿನ್ನಲೆಯಲ್ಲಿ ರೈತರು ಬಳೆ ಉಳಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಪಂಪ್ ಸೆಟ್ ಬಳಕೆ ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ರೈತರ ಪಂಪಸೆಟ್ಟುಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕಾದ ಕರ್ತವ್ಯ ಸರ್ಕಾರದ್ದು ಎಂದರು.
ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿಯೂ ವಿದ್ಯುತ್ ಅಭಾವವಿತ್ತು. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿ ರೈತರಿಗಲ್ಲದೆ ಜನತೆಗೂ ವಿದ್ಯುತ್ ಪೂರೈಕೆ ಮಾಡಿದ್ದೆವು. ಈ ಸರ್ಕಾರ ಜನ ಹಿತವನ್ನು ಮರೆತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಜನರ ಜೀವನದೊಂದಿಗೆ ಚಲ್ಲಾಟ ಆಡುವುದನ್ನು ನಾನು ಖಂಡಿಸುತ್ತೇನೆ. ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದನ್ನು ಬಿಡಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಉತ್ತಮ ಮಳೆ ಆಗಿತ್ತು ಆಗ ವಿದ್ಯುತ್ ಇತ್ಪಾದನೆ ಹಾಗೂ ನಿರ್ವಹಣೆ ಮಾಡದೇ ಇರುವುದರಿಂದ ವಿದ್ಯುತ್ ಅಭಾವವಾಗುತ್ತಿದೆ ಎನ್ನುವ ಕುಂಟು ನೆಪವನ್ನು ಹೇಳದೇ ಸರ್ಕಾರ ತನ್ನ ಕೆಲಸವನ್ನು ಮೊದಲು ಮಾಡುವುದನ್ನು ಅರಿತುಕೊಳ್ಳಲಿ ಎಂದು ಸರ್ಕಾರವನ್ನು ತರಾಟಗೆ ತಗೆದುಕೊಂಡರು.
ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿ ರಾಜ್ಯದಲ್ಲಿ ಪ್ರಮುಖವಾಗಿ ನೀರಾವರಿ ಸೇರಿದಂತೆ ಇತರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಒಂದೇ ಒಂದು ಕಿಮೀ ರಸ್ತೆ ನಿರ್ಮಾಣ ಮಾಡಿಲ್ಲ. ಗ್ಯಾರಂಟಿ ಸೌಲತ್ತುಗಳನ್ನು ನೀಡುತ್ತದ್ದೇವೆ ಎಂಬ ಕುಂಟು ನೆಪ ಹೇಳಿಕೊಂಡು ಜನತೆಯ ಜೀನವದೊಂದಿಗೆ ಚಲ್ಲಾಟ ಆಗುತ್ತಿದೆ ಎಂದು ಸರ್ಕಾರವನ್ನು ತರಾಟಗೆ ತಗೆದುಕೊಂಡರು.
ಸರ್ಕಾರದಲ್ಲಿ ಹಣ ವಿಲ್ಲ, ಆರ್ಥಿಕತೆ ದಿವಾಳಿ ಆಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಣ ನೀಡದ್ದಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಹಣ ನೀಡದಿದ್ದರೆ ಯಾವುದೇ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಹೇಳಿದರು.
೪೨ ಹಾಗೂ ೫೦ ಕೋಟಿ ಹಣ ದೊರೆತಿರುವ ಕುರಿತು ತನಿಖೆ ಆಗಬೇಕು. ಈ ಹಣ ಪಂಚ ರಾಜ್ಯಗಳ ಚುನಾವಣೆಗಳಿಗೆ ಬಳಗೆ ಆಗುತ್ತಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ. ಇದೆಲ್ಲ ತನಿಖೆಯಿಂದ ದೃಢವಾಗಬೇಕಷ್ಟೆ ಎಂದರು.
ಜಾತಿವಾರು ಜನಗಣತಿಯಿಂದ ಭಿನ್ನಾಭಿಪ್ರಾಯ, ಅಂತಹ ಕಲಹ ಆಗಬಹುದು ಎನ್ನುವ ಕಾರಣಕ್ಕೆ ಈ ಹಿಂದ ಇಂತಹ ಕೆಲಸಕ್ಕೆ ಯಾರೂ ಕೈ ಹಾಕಿರಲಿಲ್ಲ ಇದನ್ನು ಮಾಡುತ್ತಿರುವುದು ಸರಿಯಲ್ಲ ಎನ್ನುವುದು ಜನಸಾಮಾನ್ಯರ ಅಭಿಪ್ರಾಯವಾಗಿದೆ ಎಂದರು.