ಹೊಸದಿಗಂತ ವರದಿ ಚಿಕ್ಕಬಳ್ಳಾಪುರ:
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಐದು ವರ್ಷದ ಅವಧಿಯಲ್ಲಿ ಎಷ್ಟು ಉಧ್ಯೋಗ ಕಲ್ಪಿಸಿದ್ದಾರೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸವಾಲು ಹಾಕಿದರು.
ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಗುರುವಾರ ರೆಡ್ ಕ್ರಾಸ್ ನಿಂದ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರ ಐದು ವರ್ಷದ ಅವಧಿಯಲ್ಲಿ ಕಲ್ಪಿಸಿದ ಉದ್ಯೋಗಗಳ ಬಗ್ಗೆ ಹೇಳಿದರೆ, ನಾವು ಪ್ರಧಾನಿ ನರೇಂದ್ರಮೋದಿಯವರ ಅವಧಿಯಲ್ಲಿ ಯಾವ ಕ್ಷೇತ್ರದಲ್ಲಿ ಏನು ಅಬಿವೃದ್ಧಿಯಾಗಿದೆ ಎಂಬ ಬಗ್ಗೆ ಹೇಳುತ್ತೇವೆ, ಸುಮ್ಮನೆ ಬಸ್ ಹತ್ತಿಕೊಂಡು ಹೋಗುತ್ತಿದ್ದಾರೆ, ಹೋಗಲಿ ಎಂದು ಲೇವಡಿ ಮಾಡಿದರು.
ಉತ್ಸವದ ಹೆಸರಿನಲ್ಲಿ ದುಂಧುವೆಚ್ಚ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚ ದುಂದು ವೆಚ್ಚ ವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಯಾವುದೇ ನಾಡಿನ ಅಭಿವೃದ್ಧಿ ಮಾಡುವಾಗ, ಬಿತ್ತನೆಗೆ ಹೂಡಿಕೆ ಮಾಡಿದಂತೆ. ಇದು ಬಿತ್ತನೆಯ ಹಣ, ಇದರಿಂದ ಉತ್ತಮ ಪೈರು ಬಂದು, ಒಳ್ಳೆಯ ಬೆಳೆ ಸಿಗಲಿದೆ. ರೈತರಿಗೆ ಉತ್ತಮ ಫಸಲು ಸಿಕ್ಕಿದಾಗ ಅದರಿಂದ ಲಾಭವೂ ಸಿಗಲಿದೆ. ಕೃಷಿಯ ಬಗ್ಗೆ ಜ್ಞಾನ ಇಲ್ಲದವರು, ನಾಡು ಕಟ್ಟುವ ಅನುಭವ ಇಲ್ಲದವರ ಮಾತು ಇದು ಎಂದು ಖಾರವಾಗಿಯೇ ಉತ್ತರಿಸಿದರು.
ಬೃಹತ್ ರಕ್ತದಾನ ಶಿಬಿರ
ಯುವಕರ ಪಾಲಿನ ಆದರ್ಶಪ್ರಾಯರಾದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪವಿತ್ರವಾದ ಕೆಲಸಕ್ಕೆ ನಾಂದಿ ಹಾಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ಸ್ವಯಂಪ್ರೇರಿತ ರಕ್ತದಾನ ಶಿಬಿರ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹಳೇ ಆಸ್ಪತ್ರೆ, ಎಸ್ ಜೆಸಿಐಟಿ, ಪ್ರಥಮ ದರ್ಜೆ ಕಾಲೇಜು ಸೇರಿ ಮೂರು ಕಡೆ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಅತಿ ಹೆಚ್ಚು ಯೂನಿಟ್ ರಕ್ತ ಶೇಖರಣೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ, ಪ್ರಸ್ತುತ ಜನಸಂಖ್ಯೆಯಲ್ಲಿ ಕನಿಷ್ಠ ಶೇ.1 ರಷ್ಟು ಮಂದಿ ಪ್ರತಿವರ್ಷ ರಕ್ತದಾನ ಮಾಡಿದರೆ ಎಷ್ಟೋ ಜೀವ ಉಳಿಸಲು ಸಾಧ್ಯವಾಗಲಿದೆ. ಶಿಬಿರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ವೈದ್ಯರು, ಹೋಂ ಗಾರ್ಡ್, ವಕೀಲರು ಸೇರಿದಂತೆ ಎಲ್ಲ ವರ್ಗದವರೂ ಭಾಗವಹಿಸಿರುವುದು ಶ್ಲಾಘನೀಯ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಆರೋಗ್ಯವಂತರೆಲ್ಲರೂ ಭಾಗವಹಿಸಿ ರಕ್ತದಾನ ಮಾಡಲು ಮನವಿ ಮಾಡಿದ ಸಚಿವರು, ವಿವೇಕಾನಂದರು ಯುವಕರ ಕಣ್ಮಣಿ, ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚುರ ಪಡಿಸಿದ ಜ್ಞಾನಿ. ಅಂತಾರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ವಿವಿಧತೆಯಲ್ಲಿ ಏಕತೆ ಬಗ್ಗೆ ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ಯುವಕರು ಸಾಧನೆಯೊಂದಿಗೆ ಸೇವೆಯನ್ನೂ ಮೈಗೂಡಿಸಿಕೊಳ್ಳಬೇಕು, ಪ್ರತಿ ವರ್ಚಶಿಬಿರ ನಡೆಯಲಿ ಎಂದು ಸಚಿವರು ಆಶಿಸಿದರು.