ಹೊಸದಿಗಂತ ವರದಿ, ಚಿತ್ರದುರ್ಗ:
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಖಜಾನೆ ನಿರಂತರವಾಗಿ ಲೂಟಿಯಾಗುತ್ತಿದೆ. ವಾಲ್ಮೀಕಿ ನಿಗಮ ಹಗರಣ ಸರ್ಕಾರದ ಖಜಾನೆಯ ಹಗಲು ದರೋಡೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಹಿನ್ನಲೆಯಲ್ಲಿ ನೆರೆ ರಾಜ್ಯವಾದ ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಹಣ ಹೋಗಿದೆ. ಮುಖ್ಯಮಂತ್ರಿಗಳು ಇದುವರೆವಿಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದರು.
ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಆಗಿದೆ. ಸರ್ಕಾರಿ ಖಜಾನೆಯ ಹಗಲು ದರೋಡೆ ಆಗಿರುವುದನ್ನು ಬಿಟ್ಟು ಬೇರೆ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ೧೮೭ ಕೋಟಿ ರೂ.ಗಳನ್ನು ನೇರವಾಗಿ ಖಜಾನೆಯಿಂದ ನೆರೆ ರಾಜ್ಯಗಳ ಲೋಕಸಭಾ ಚುನಾವಣೆಗೆ ಹೋಗಿರುವ ಗುಮಾನಿ ಇದೆ. ಆಂಧ್ರದ ಒಂಬತ್ತು ಕಂಪನಿಗಳಿಗೆ ಹಣ ಹೋಗಿದೆ ಎಂದು ತಿಳಿಸಿದರು.
ಚಂದ್ರಶೇಖರ್ ಅವರ ಡೆತ್‌ನೋಟ್‌ನಲ್ಲಿ ಉಪಖಾತೆ ತೆರೆಯಲು ಸಚಿವರೇ ಮೌಖಿಕ ಆದೇಶ ನೀಡಿದ್ದರು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಉಪಖಾತೆ ತೆರೆದ ನಂತರ ಚೆಕ್‌ಬುಕ್, ಪಾಸ್‌ಬುಕ್ ತೆಗೆದುಕೊಂಡಿರಲಿಲ್ಲ. ಇದಕ್ಕೆ ಎಂ.ಡಿ. ಆದೇಶ ಇತ್ತು. ಪ್ರಕರಣ ಬಯಲಿಗೆ ಬಂದು ಇಷ್ಟು ದಿನ ಆದರೂ ಸಿಎಂ,ಡಿಸಿಎಂ ಸೇರಿದಂತೆ ಸಚಿವರು ಬಾಯಿ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಜನತಾ ಪರಿವಾರದಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸಣ್ಣ ರೈಲು ಅಪಘಾತಕ್ಕೆ ರಾಜೀನಾಮೆ ನೀಡಿದ್ದರು. ರಾಮಕೃಷ್ಣ ಹೆಗಡೆ ಅವರು ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗಲೂ ರಾಜೀನಾಮೆ ಕೊಟ್ಟಿದ್ದರು ಎಂದು ಸ್ಮರಿಸಿದರು.
ಎಸ್‌ಐಟಿ, ಸಿಓಡಿ ತನಿಖೆಯಿಂದ ನಿಸ್ಪಕ್ಷಪಾತ ತನಿಖೆ ಸಾಧ್ಯ ಇಲ್ಲ. ಶೆಡ್ಯೂಲ್ಡ್ ಬ್ಯಾಂಕ್ ಆಗಿರುವುದರಿಂದ ಈ ಸಂಸ್ಥೆಗಳಿಂದ ತನಿಖೆ ಸರಿಯಲ್ಲ. ಕೇಂದ್ರದ ತನಿಖಾ ಸಂಸ್ಥೆಗಳಿಂದ ತನಿಖೆ ಆಗಬೇಕು. ಆರ್ಥಿಕ ವರ್ಷಾಂತ್ಯಕ್ಕೆ ಎಲ್ಲ ಇಲಾಖೆ, ನಿಗಮಗಳಿಂದ ಆಡಿಟ್ ಆಗುತ್ತದೆ. ಆಗ ಈ ಹಣ ವರ್ಗಾವಣೆ ವಿಚಾರ ಬಯಲಿಗೆ ಬರಬೇಕಿತ್ತು. ಆದರೂ ಬಂದಿಲ್ಲ ಎಂದರೆ ಇದರಲ್ಲಿ ಸರ್ಕಾರದ ಪಾತ್ರ ಇದೆ. ಹಾಗಾಗಿ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಇಡೀ ಸಂಪುಟ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ರಾಜ್ಯದ ಆರ್ಥಿಕ ಇಲಾಖೆಯ ನೇರ ಹೊಣೆ ಇರುವ ಹುಜುರ್ ಖಾತೆಯಿಂದಲೂ ೪೪ ಕೋಟಿ ರೂ.ಹೋಗಿದೆ. ಇದನ್ನೆಲ್ಲಾ ಗಮನಿಸಿದಾಗ ಸರ್ಕಾರ ಹಗಲು ದರೋಡೆ ಮಾಡಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೮೦ ಲಕ್ಷ ರೂ. ಬಿಲ್ ಕೊಡಲು ಕಮಿಷನ್‌ಗೆ ಸತಾಯಿಸಿದ್ದಾರೆ. ಈ ಕಾರಣಕ್ಕೆ ಆತ್ಮಹತ್ಯೆ ಆಗಿದೆ. ಈಶ್ವರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಮರಣದಂಡನೆಗೆ ಗುರಿಪಡಿಸಬೇಕು ಎಂದಿದ್ದರು. ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯ ಆರು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೋಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ , ಜಿಲ್ಲಾಧ್ಯಕ್ಷ ಎ. ಮುರುಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ಖಜಾಂಚಿ ಮಾಧುರಿ ಗಿರೀಶ್, ಕಲ್ಲೇಶಯ್ಯ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇದ್ರೇ, ತಿಪ್ಪಸ್ವಾಮಿ ಚಲವಾದಿ, ಉಪಸ್ಥಿತರಿದ್ದರು.