ಹೊಸದಿಗಂತ ಬೀದರ್:
ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲರೂ ಕನ್ನಡ ಮಾತನಾಡಲಿ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಲಿ, ಕನ್ನಡವೇ ನಮ್ಮ ಆಸ್ಮಿತೆ, ಕನ್ನಡದ ಬಗ್ಗೆ ಸ್ವಾಭಿಮಾನವಿರಲಿ, ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರೋಗೋಣ ಎಂದು ಅರಣ್ಯ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಇಂದು 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿರಿಮೆಯು ತುಂಬಾ ವೈಶಿಷ್ಟತೆಗಳಿಂದ ಕೂಡಿದೆ. ರಾಜ-ಮಹಾರಾಜರು ಸಹ ತಮ್ಮ ಆಡಳಿತದ ಕಾಲಾವಧಿಯಲ್ಲಿ ಕನ್ನಡ ನಾಡು-ನುಡಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯತೋಟವಾಗಿದೆ. ಇದು ಬೀದರ್ ಜಿಲ್ಲೆಗೆ ಅತ್ಯಂತ ಹೆಚ್ಚು ಒಪ್ಪುತ್ತದೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ ಬಸವಕಲ್ಯಾಣವೂ ಇದೆ, ನಾನಕ್ಝೀರಾ ಗುರುದ್ವಾರವೂ ಇದೆ, ಮಹಮದ್ಗವಾನರ ಮದರಸಾ ಇದೆ, ಸಂತ ಪಾಲರಇಗರ್ಜಿಯೂ ಇದೆ, ಝರಣಿ ನರಸಿಂಹ ಸ್ವಾಮಿ, ಪಾಪನಾಶಿ ದೇವಾಲಯವೂ ಇದೆ, ಇಲ್ಲಿ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ನಿತ್ಯ ವ್ಯವಹಾರದಲ್ಲಿ, ಹಿಂದಿ ಭಾಷೆಯ ಬಳಕೆ ಇದ್ದರೂ ನಮ್ಮೆಲ್ಲರ ಮನಸ್ಸು ಕನ್ನಡವೇ ಆಗಿದೆ. ಹೀಗಾಗಿಯೇ ಅನ್ಯ ಭಾಷೆಯ ಪ್ರಭಾವದ ನಡುವೆಯೂ ಗಡಿ ಜಿಲ್ಲೆಯಾದ ಬೀದರ್ ನಲ್ಲಿ ಕನ್ನಡ ಉಳಿದಿದೆ, ಬೆಳೆದಿದೆ, ಬೆಳಗುತ್ತಿದೆ ಎಂದು ಸಂತೋಷದಿಂದ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನ ಪದ್ಧತಿ ಇದೆ. ಭಾವೈಕ್ಯತೆಯ ನಾಡಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆ ಮಾಡಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಏಕೀಕರಣ ಚಳವಳಿಯಲ್ಲಿ ರಾಜ್ಯದ ಹಲವಾರು ಶ್ರಮಿಸಿದ್ದಾರೆ ಎಂದರು.
ಕನ್ನಡಿಗರು ಆಕ್ರಮಣಕಾರಿಗಳಲ್ಲ, ಹೀಗಾಗಿ ಅನೇಕ ವಿಷಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ, ಕಳಸಾ ಬಂಡೂರಿ, ಗೋಧಾವರಿ ಅಲ್ಲದೇ ಗಡಿ ವಿವಾದವನ್ನು ಕೆಲವರು ಸ್ವಾಥಕ್ಕಾಗಿ ಜೀವಂತ ಇಟ್ಟಿದ್ದಾರೆ ಎಂದರಲ್ಲದೇ ನಾಡು, ನುಡಿ, ನೆಲ, ಜಲ ಭಾಷೆ ಬೆಳೆಸಲು ನಾವೆಲ್ಲರೂ ಬದ್ಧರಾಗಬೇಕೆಂದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಎಂ.ಎ.ವಾನತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.