ಹೊಸದಿಗಂತ ವರದಿ, ರಾಯಚೂರು :
ಪರಕೀಯರ ಎಷ್ಟೋ ದಾಳಿಗಳಾದರೂ ನಮ್ಮ ಭಾರತೀಯ ಭವ್ಯ ಪರಂಪರೆ ಇಂದಿಗೂ ಉಳಿದುಕೊಂಡಿದೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಭವ್ಯ ಪರಂಪರೆಯನ್ನು ನಾವಿಂದು ಅನುಸರಿಸುತ್ತ ಬರುತ್ತಿದ್ದೇವೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯವನ್ನು ಭಾರತೀಯರಾದ ನಾವೆಲ್ಲರೂ ಮಾಡಬೇಕಿದೆ ಎಂದು ಸಂಸದರು ಹಾಗೂ ಮೈಸೂರು ರಾಜಮನೆತನದ ಯಧುವೀರ ಶ್ರೀಕಂಠದತ್ತ ಒಡೆಯರ್ ಹೇಳಿದರು.
ಗುರುವಾರ ಮಂತ್ರಾಲಯ ರಾಘವೇಂದ್ರ ಶ್ರೀಗಳ ೩೫೩ನೇ ಉತ್ತರ ಆರಾಧನೆ ಮಹೋತ್ಸವದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ನೀಡಲಾಗುವ ರಾಘವೇಂದ್ರಾನುಗ್ರಹ ಪ್ರಶಸ್ತಿ ಸ್ವೀಕರಿ ಮಾತನಾಡಿ, ಈ ಪಾರಂಪರಿಕ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕಿದೆ. ಪರಂಪರೆ ಶಾಶ್ವತವಾಗಿ ಉಳಿಯಬೇಕು ಉಳಿಯುತ್ತದೆ ಎಂದರು.
ಭಾರತೀಯ ಸಂಸ್ಕೃತಿಯನ್ನು ಇಂದು ಉಳಿಸುವುದರೊಂದಿಗೆ ಮುಂದಿನ ಪೀಳಿಗೆಗೂ ನೀಡಿ ಹೋಗಬೇಕಿದೆ. ಮೈಸೂರು ರಾಜ ಮನೆತನದವರು ಏನೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಅವೆಲ್ಲ ಗುರುಪರಂಪರೆಯ ಮಾರ್ಗದರ್ಶನ ಹಾಗೂ ಆಶೀರ್ವಾದಿಂದಾಗಿವೆ ಎಂದು ತಿಳಿಸಿದರು.
ಮಂತ್ರಾಲಯ ನನ್ನದು ಮೊದಲ ಭೇಟಿ, ಬರಬೇಕೆಂದು ಅನೇಕ ಬಾರಿ ಅಂದುಕೊoಡಿದ್ದೆ ಆದರೆ ಅದು ಸಾಧ್ಯವಾಗಿರಲಿಲ್ಲ, ಅವೆಲ್ಲಕ್ಕೂ ಕಾಲ ಎನ್ನುವುದಿರುತ್ತದೆ. ರಾಯರ ೩೫೩ನೇ ಉತ್ತರ ಆರಾಧನೆ ಸಂದರ್ಭದಲ್ಲಿ ಆಶಿರ್ವಾದ ಪಡೆಯಬೇಕೆನ್ನು ಸಂಕಲ್ಪ ಇರುವುದರಿಂದ ಈಗ ಸಾಧ್ಯವಾಗಿದೆ. ಮೈಸೂರು ದಸರಾದಲ್ಲಿ ಜನಸ್ತೋಮವನ್ನು ಕಾಣಬಹುದು. ಅದರ ನಂತರದಲ್ಲಿ ಮಂತ್ರಾಲಯದಲ್ಲಿ ಭಕ್ತರ ಜನಸ್ತೋಮವನ್ನು ನೋಡಲು ಬರಬೇಕು ಎಂದರಲ್ಲದೆ ಇದೇ ಸಂದರ್ಭದಲ್ಲಿ ಮುಂದಿನ ಮೈಸೂರು ದಸರಾಕ್ಕೆ ಶ್ರೀಗಳು ಆಗಮಿಸಬೇಕೆಂದು ಯಧುವೀರ ಶ್ರೀಕಂಠದತ್ತ ಒಡೆಯರ ಆಹ್ವಾನ ನೀಡಿದರು.
ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಪಾದಂಗಳು ಮಾತನಾಡಿ, ದೇಶ ಮತ್ತು ಶ್ರೀಮಠದ ಇತಿಹಾಸದಲ್ಲಿ ಈ ದಿನ ಮೈಸೂರು ರಾಜ ಮನೆತನದ ರಾಜವಂಶಸ್ತರಿಗೆ ರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡುತ್ತಿರುವುದು ಸ್ಮರಣೀಯವಾಗಿದೆ ಎಂದರು.
ನಂಜನಗೂಡಿನಲ್ಲಿ ಮೈಸೂರು ಸಂಸ್ಥಾನದ ವತಿಯಿಂದ ನಿರ್ಮಿಸಿ ರಾಘವೇಂದ್ರ ಸ್ವಾಮೀಜಿಯವರ ಮಠವನ್ನು ನಿರ್ಮಿಸಿದ್ದು ಇತಿಹಾಸವಾಗಿದೆ. ಇದು ಶ್ರೀಮಠಕ್ಕೂ ಮತ್ತು ರಾಜಮನೆತನಕ್ಕೂ ಇರುವ ಸಂಬoಧವನ್ನು ತೋರಿಸುತ್ತದೆ ಎಂದು ಹೇಳಿದರು.
ಜನಪರ ಕಾಳಜಿ ಹೊಂದಿದ್ದು ಮೈಸೂರು ಸಂಸ್ಥಾನ. ಇಂದು ಲಕ್ಷಾಂತರ ಎಕರೆಗೆ ನೀರೊದಗಿಸುವುದಕ್ಕೆ ಮತ್ತು ವಿದ್ಯುತ್ ಉತ್ಪಾದನೆಗೆ ಕಾರಣವಾದದ್ದು ಕೆಆರ್‌ಎಸ್ ಜಲಾಶಯ ಎನ್ನುವುದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ನಮ್ಮ ಹೆಮ್ಮೆಯ ಮೈಸೂರು ಸಂಸ್ಥಾನ ಜನ ಮಾನಸದಲ್ಲಿ ಎಂದೆoದಿಗೂ ಅಚ್ಚಳಿಯದೇ ಉಳಿಯಲಿ ಎಂದು ಹೇಳಿದರು.
ಪಂಡಿತ ಕೇಸರಿ ಮಹಾಮೋಪಾಧ್ಯ ರಾಜಾಗಿರಿಯಚಾರ್ ಮಾತನಾಡಿ, ಮೈಸೂರು ಸಂಸ್ಥಾನಕ್ಕೂ ಶ್ರೀ ಮಠಕ್ಕೂ ಅವಿನಾಭಾವ ಸಂಬoಧವಿದೆ ನಂಜನಗೂಡಿನಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ ಮುಮ್ಮಡಿ ಕೃಷ್ಣರಾಜ ಒಡೆಯ ಅವರ ಕಾಲದಲ್ಲಿ ನಿರ್ಮಿಸಲಾಗಿದೆ. ಜಯಚಾಮರಾಜೇಂದ್ರ ಒಡೆಯರ ಅವರು ೫೦ರ ದಶಕದಲ್ಲಿ ಶ್ರೀ ಮಠಕ್ಕೆ ಆಗಮಿಸಿದ್ದರು ಎಂದರು.
ವೇದಿಕೆಯಲ್ಲಿ ಸ್ವರೂಪಗೋಪಾಲರಾಜ ಅರಸ್ ಸೇರಿದಂತೆ ಅನೇಕ ಗಣ್ಯರಿದ್ದರು.