ಹೊಸದಿಗಂತ ವರದಿ ವಿಜಯಪುರ:
ಇಲ್ಲಿನ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷವೇ ಮುಖ್ಯವಾದಲ್ಲಿ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ, ಹೀಗಾಗಿ ನಾವೆಲ್ಲರು ಸೇರಿ ಕೈಜೋಡಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಪಾಲಿಕೆ ಚುನಾವಣೆ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ ಹೇಳಿದರು.
ನಗರದಲ್ಲಿ ಪಾಲಿಕೆ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಹಾಗೂ ಹಾಗೂ ರಾಜ್ಯದಲ್ಲಿ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಜನಪರವಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಈ ಚುನಾವಣೆಯಲ್ಲಿ ನಾವು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತೇವೆಯೋ ಅದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಹಿಂದೆ ವಿಜಯಪುರವನ್ನು ಧುಳಾಪುರ ಎನ್ನುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ನಗರದ ಅಭಿವೃದ್ಧಿಯ ಚಿತ್ರಣವೇ ಬದಲಾಗಿವೆ. ತಾಂಡಾಗಳು, ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ನಗರ ಸ್ಲಂ ಮುಕ್ತ ನಗರವಾಗಿಲಿದೆ. ನೇರವಾಗಿಯೇ ಬಡವರಿಗೆ ಮನೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಹಿಂದುತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ನಾವೆಲ್ಲರೂ ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ಪಾಲಿಕೆಯಲ್ಲಿ ಅಧಿಕಾರಕ್ಕೆ ಏರುವುದು ನಿಶ್ಚಿತ, ಕಳೆದ ನಾಲ್ಕು ವರ್ಷಗಳಲ್ಲಿ ಗೂಂಡಾಗಿರಿ ರಹಿತ, ಸುಭದ್ರ ಆಡಳಿತ ನಮ್ಮ ಪಕ್ಷವನ್ನು ಕೈ ಹಿಡಿಯುತ್ತದೆ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಮಲ ಪಕ್ಷವನ್ನು ಅರಳಿಸಬೇಕು. ನಮ್ಮ ಪಕ್ಷದ ಹಿಂದೂ ಸಮಾಜದವರೆ ಮೇಯರ್ ಹಾಗೂ ಉಪಮೇಯರ್ ಆಗಬೇಕು. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ಮಾಹಿಸಬೇಕು ಎಂದರು.