ಹೊಸದಿಗಂತ ವರದಿ ಬೆಳಗಾವಿ:
ಮೇಯರ್ ಸಹಿ ಮಾಡಿದ ಪತ್ರ ಕಾಣೆಯಾಗಿದ್ದು, ಈ ಸಂಬಂಧ ಪಾಲಿಕೆ ಪರಿಷತ್ ಕಾರ್ಯದರ್ಶಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮೊನ್ನೆ ಆಯುಕ್ತರು ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಮೇಯರ್ ದೂರು ನೀಡಿದ್ದರೆ, ಈಗ ಆಯುಕ್ತರು ಪರಿಷತ್ ಕಾರ್ಯದರ್ಶಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ 2024-25ನೇ ಸಾಲಿನ ತೆರಿಗೆ ಹೆಚ್ಚಳ ಮಾಡುವ ಕುರಿತು ಮೇಯರ್ ಶೋಭಾ ಸೋಮನಾಚೆ ಮಾಡಿರುವ ಸಹಿ ಪತ್ರ ಕಾಣೆಯಾಗಿರುವ ಕುರಿತು ಪಾಲಿಕೆಯ ಕೌನ್ಸಿಲ್ ಸೆಕ್ರೆಟರಿ ವಿರುದ್ಧ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯದ ಜಟಾಪಟಿಗೆ ಕಾರಣವಾಗಿದೆ.
ಪಾಲಿಕೆಯ ಕೌನ್ಸಿಲ್ ಸಭೆಯ ನಿರ್ಧಾರವನ್ನು 2023-24ರ ಬದಲು 2024-25 ಎಂದು ಮೇಯರ್ ಸಹಿ ಮಾಡಿರುವ ಪತ್ರ ಕಾಣೆಯಾಗಿರುವ ಕುರಿತು ಕೌನ್ಸಿಲ್ ಸೆಕ್ರೆಟರಿ ಹಾಗೂ ಇನ್ನಿತರ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಪಾಲಿಕೆಯ ಸಿಸಿ ಕ್ಯಾಮರಾದಲ್ಲಿ ಕೌನ್ಸಿಲ್ ಸೆಕ್ರೆಟರಿ ಮೇಯರ್ ಪತ್ರ ಬದಲಾವಣೆ ಮಾಡಿರುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಇನ್ನೂ, ಪಾಲಿಕೆಯಲ್ಲಿ 138 ಜನ ಪೌರ ಕಾರ್ಮಿಕರ ಅಕ್ರಮ ನೇಮಕಾತಿಯ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಿಲ್ಲಾಧಿಕಾರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಗರ ಪೊಲೀಸ್ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.