ಹೊಸದಿಗಂತ ವರದಿ,ಕಲಬುರಗಿ:
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವು ಸೇತುವೆಗಳು ಹಾಗೂ ದೇವಸ್ಥಾನಗಳು ಜಲಾವೃತಗೊಂಡಿವೆ.
ಶುಕ್ರವಾರ ತಡರಾತ್ರಿಯಿಂದ ಪ್ರಾರಂಭವಾದ ಮಳೆ ಭಾನುವಾರ ಮಧ್ಯಾಹ್ನದ ವರೆಗೂ ಬಿಟ್ಟು ಬಿಡದೇ ಸುರಿಯುತ್ತಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋಲಕಪಲ್ಲಿ ಅಣವಾರ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿ ಊರಿಂದ ಊರಿಗೆ ಹೋಗುವ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಇನ್ನೂ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಳಖೇಡದ ಜಯತೀರ್ಥರ ಮೂಲ ವೃಂದಾವನವು ಸಂಪೂರ್ಣ ಜಲಾವೃತವಾಗಿ,ಕಾಗಿಣಾ ನದಿಯ ಸೇತುವೆ ಮೇಲಿಂದ ಹಾದುಹೋಗುವ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗೀತವಾಗಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆನಕನಳ್ಳಿ ಗ್ರಾಮದ ಅನೇಕ ಮನೆಗಳಿಗೆ ನೀರು ಹೊಕ್ಕಿದ್ದು, ಅದೇ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸುತ್ತಲೂ ಮಳೆಯ ನೀರು ಆವರಿಸಿಕೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.