ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣುಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪು ರಾಜ್ಯದ ರಾಜಾಜಿನಗರ ವಿಶೇಷ ಪೋಕ್ಸೋ ಕೋರ್ಟ್ ನಿಂದ ಹೊರಬಿದ್ದಿದ್ದು, ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿ ಮಹತ್ವದ ಘಟ್ಟವನ್ನ ತಲುಪಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ಮತ್ತು ಸಿಐಡಿಗೆ ಅಭಿನಂದನೆ ಸಲ್ಲಿಸಿದರು. “ಬಿ.ಕೆ. ಸಿಂಗ್ ನೇತೃತ್ವದ ಎಸ್‌ಐಟಿ ಅತ್ಯುತ್ತಮವಾಗಿ ತನಿಖೆ ನಡೆಸಿದ್ದು, ಕೇವಲ ಒಂದು ವರ್ಷ ನಾಲ್ಕು ತಿಂಗಳೊಳಗೆ ತೀರ್ಪು ಬರಲಿರುವಷ್ಟು ಶೀಘ್ರಗತಿಯಲ್ಲಿದೆ. ಈ ತೀರ್ಪು ಕೇವಲ ನ್ಯಾಯಯುತವೆ ಅಲ್ಲ, ಐತಿಹಾಸಿಕವೂ ಹೌದು,” ಎಂದು ಪರಮೇಶ್ವರ್ ಹೇಳಿದರು.
ಈ ಪ್ರಕರಣವನ್ನು ರಾಜಕೀಯ ಕಣ್ಣಿನಿಂದ ನೋಡಬಾರದು. ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧದ ವಿರುದ್ಧವಾಗಿ ಪೊಲೀಸ್ ಇಲಾಖೆ ತೋರಿದ ಬದ್ಧತೆ ಹಾಗೂ ಕಾರ್ಯಕ್ಷಮತೆಯೆ ಈ ಫಲಿತಾಂಶ. ಆದ್ದರಿಂದ, ಎಸ್‌ಐಟಿ ತಂಡಕ್ಕೆ ಮಾತ್ರವಲ್ಲ, ಸಂಪೂರ್ಣ ಪೊಲೀಸ್ ಇಲಾಖೆಗೆ ನಾಮಗತ ಮಾನ್ಯತೆ ಸಲ್ಲುತ್ತದೆ ಎಂದರು.
ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನಿಖಾ ಸಂಸ್ಥೆಗಳ ಪರಿಶ್ರಮಕ್ಕೆ ಪ್ರತಿಷ್ಠೆ ನೀಡುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಗೃಹ ಸಚಿವರು, “ಎಸ್‌ಐಟಿ ತಂಡಕ್ಕೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುವುದು. ಜೊತೆಗೆ, ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡಲಾಗುತ್ತದೆ,” ಎಂದು ತಿಳಿಸಿದರು.
ಇತ್ತ ಪ್ರಜ್ವಲ್ ರೇವಣ್ಣ ಈಗ ಅಧಿಕೃತವಾಗಿ ಕೈದಿಯಾಗಿ ಪರಿವರ್ತನೆಗೊಂಡಿದ್ದು, ಜೈಲಿನಲ್ಲಿ ಕೈದಿ ಸಂಖ್ಯೆ 15528 ಅನ್ನು ಪಡೆದಿದ್ದಾರೆ. ಜೈಲಿನಲ್ಲಿ ಇನ್ನು ಮುಂದೆ ಪ್ರಜ್ವಲ್ ದಿನಕ್ಕೆ ಎಂಟು ಗಂಟೆಗಳಷ್ಟು ಕೈದಿಗೆ ವಿಧಿಸಲಾಗುವ ಸಾಮಾನ್ಯ ಕೆಲಸಗಳನ್ನು ಮಾಡಬೇಕಾಗಲಿದೆ. ಬಿಳಿ ಸಮವಸ್ತ್ರ ಧರಿಸಿ, ನಿರ್ದಿಷ್ಟ ಬ್ಯಾರೆಕ್‌ನಲ್ಲಿ ವಾಸಿಸುತ್ತಿರುವ ಅವರು, ಸಂಪೂರ್ಣವಾಗಿ ನವ ಜೀವನಶೈಲಿಗೆ ಒಳಗಾಗಿದ್ದಾರೆ.