Friday, October 7, 2022

Latest Posts

ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆ ನಂಟು: ಕಾನ್ಪುರದಲ್ಲಿ ಶಂಕಿತ ಉಗ್ರನ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ 19 ವರ್ಷದ ಶಂಕಿತನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ. ಅಲ್ಲದೇ, ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ.

ಉಗ್ರ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಜೊತೆ ನಂಟು ಹೊಂದಿದ್ದ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಕಾನ್ಪುರದ ಹಬೀಬುಲ್ ಅಲಿಯಾಸ್ ಸೈಫುಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬಂಧಿತನಾದ ಶಂಕಿತ ಭಯೋತ್ಪಾದಕ ನದೀಮ್‌ನ ಸಹಾಯಕ ಈತ.

ವಿಚಾರಣೆಯಲ್ಲಿ ನದೀಮ್ ತನಗೆ ಸೈಫುಲ್ಲಾ ಹಾಗೂ ನಾವಿರಿಬ್ಬರೂ ಜೈಶ್-ಎ-ಮೊಹಮ್ಮದ್ ಸಂಘಟನೆ ಜೊತೆಗೆ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಸೈಫುಲ್ಲಾ ನೆಲೆಸಿದ್ದು, ಮೂಲತಃ ಬಿಹಾರದ ಮೋತಿಹಾರಿ ಜಿಲ್ಲೆಯವನು ಎಂದು ಮಾಹಿತಿ ನೀಡಿದ್ದಾರೆ.

ಸೈಫುಲ್ಲಾ ವರ್ಚುವಲ್ ಐಡಿಗಳನ್ನು ತಯಾರಿಸುವಲ್ಲಿ ಪರಿಣತರಾಗಿದ್ದಾನೆ. ನದೀಮ್ ಹಾಗೂ ಸೈಫುಲ್ಲಾ ಸೇರಿಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕರಿಗೆ ಸುಮಾರು 50 ಐಡಿಗಳನ್ನು ಒದಗಿಸಿರುವ ಶಂಕೆ ವ್ಯಕ್ತವಾಗಿದೆ. ಇವರು ಟೆಲಿಗ್ರಾಮ್, ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಬಾಕಿ ಇರುವಾಗಲೇ ಶಂಕಿತ ಉಗ್ರನ ಬಂಧನದಿಂದ ಕಾನ್ಪುರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿಯೇ ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಮತ್ತಷ್ಟು ಅಲರ್ಟ್ ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!