ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಿವ್-ಇನ್ ಸಂಬಂಧ ಎಲ್ಲರಿಗೂ ಸ್ವೀಕಾರಾರ್ಹವಲ್ಲದಿದ್ದರೂ ಅಂತಹ ಸಂಬಂಧವು ಕಾನೂನುಬಾಹಿರ ಅಥವಾ ಮದುವೆಯ ಪಾವಿತ್ರ್ಯವಿಲ್ಲದೆ ಒಟ್ಟಿಗೆ ವಾಸಿಸುವುದು ಅಪರಾಧ ಎಂದು ಹೇಳಲು ಆಗಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಸ್ವೀಕರಿಸಿದರು.
ಈ ವೇಳೆ ದಂಪತಿಗಳು ವಿವಾಹಿತರಾಗಿದ್ದರೂ ಅಥವಾ ಮದುವೆಯ ಬಂಧವಿಲ್ಲದೆ ಒಟ್ಟಿಗೆ ವಾಸಿಸುತ್ತಿದ್ದರೂ ಸಹ, ವ್ಯಕ್ತಿಯ ಬದುಕುವ ಹಕ್ಕನ್ನು ಹೆಚ್ಚಿನ ಗೌರವದಿಂದ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಶಾಂತಿಯುತ ಜೀವನ ನಡೆಸುತ್ತಿದ್ದರೆ ಅದನ್ನು ಆಕ್ಷೇಪಿಸುವ ಅಥವಾ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ. ಕುಟುಂಬದ ಸದಸ್ಯರಿಗೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ ಅಡಿಯಲ್ಲಿ ರಾಜ್ಯದ ಮೇಲೆ ವಿಧಿಸಲಾದ ಜವಾಬ್ದಾರಿಗಳ ಪ್ರಕಾರ, ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಹೇಳಿದೆ.
ಒಪ್ಪಿಗೆಯಿಂದ ಬರುವ ದಂಪತಿಗಳ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ರಾಜ್ಯವು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ವಯಸ್ಕರು ಮತ್ತು ವಿವಾಹದ ಬಂಧವಿಲ್ಲದೆ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದರೆ ನ್ಯಾಯಾಲಯವು ಅವರ ನಿರ್ಧಾರವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ತಮ್ಮ ಶಾಂತಿಯುತ ಜೀವನಕ್ಕೆ ಯಾವುದೇ ಅಡ್ಡಿ ಎದುರಾದರೆ, ಅವರು ಈ ಆದೇಶದ ಪ್ರಮಾಣೀಕೃತ ಪ್ರತಿಯೊಂದಿಗೆ ಸಂಬಂಧಪಟ್ಟ ಪೊಲೀಸ್ ಆಯುಕ್ತರು/ಎಸ್‌ಎಸ್‌ಪಿ/ಎಸ್‌ಪಿ ಅವರನ್ನು ಸಂಪರ್ಕಿಸಬಹುದು ಎಂದು ನಿರ್ದೇಶಿಸಿತು. ಇದಲ್ಲದೆ, ಅರ್ಜಿದಾರರು ವಯಸ್ಕರು ಮತ್ತು ಅವರ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ಪೊಲೀಸ್ ಅಧಿಕಾರಿಗಳು ಅರ್ಜಿದಾರರಿಗೆ ತಕ್ಷಣ ರಕ್ಷಣೆ ನೀಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.

