ಲೋಕಸಭಾ ಚುನಾವಣೆ: ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಹೊಸದಿಗಂತ , ಮಂಡ್ಯ:

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾ.28 ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕುಮಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಘೋಷಣೆಯಾಗಿರುವ ವೇಳಾಪಟ್ಟಿಯಂತೆ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಗುರುವಾರ ಅಧಿಸೂಚನೆ ಹೊರಡಿಸಿದ ನಂತರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ರಜಾ ದಿನ ಹೊರತುಪಡಿಸಿ ಏ.4ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದರು.
ಏ.5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ, ಏ 26ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆಯ ಜೂನ್ 4 ರಂದು ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಕೊಠಡಿ ಸಂಖ್ಯೆ 29 ರಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ, ನಾಮಪತ್ರ ಸ್ವೀಕೃತಿ ಕೇಂದ್ರದ 100 ಮೀಟರ್ ಸುತ್ತಳತೆ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ ನಿಷೇಧಿತ ಪ್ರದೇಶಕ್ಕೆ ಮೂರು ವಾಹನಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ಇರಲಿದೆ, ಚುನಾವಣಾ ಅಧಿಕಾರಿಗಳ ಕಚೇರಿಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ ಐದು ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ, ನಾಮಪತ್ರ ಸ್ವೀಕೃತಿ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು, ನಾಮಪತ್ರ ಸಲ್ಲಿಸಲು ಅವಶ್ಯ ಇರುವ ದಾಖಲೆ ಮತ್ತು ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!