ದಿಗಂತ ವರದಿ ವಿಜಯಪುರ:
ಜಿಲ್ಲೆಯಲ್ಲಿ 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಚಡಚಣ ಸಿಪಿಐ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸಸ್ಟೇಬಲ್ ಸಂಜೀವ ಕುಮಾರ ಹೂಗಾರ ಲೋಕಾಯುಕ್ತ ಬಲೆಗೆ ಬಿದ್ದವನು.
ಚಡಚಣ ವ್ಯಾಪ್ತಿಯ ದೂರುದಾರ ಸಂಬಂಧಿಕರ ಹೊಲದಲ್ಲಿ ಹಳೆ ಬಾವಿ ದುರಸ್ತಿಗೆ ಸಂಬಂಧಿಸಿದ ಕಾಂಪೋಶನ ಮತ್ತು ಡ್ರಿಲಿಂಗ್ ಕೆಲಸ ಮಾಡುತ್ತಿದ್ದು, ಬ್ಲಾಸ್ಟಿಂಗ್ ಡ್ರಿಲ್ ಗಾಡಿ ಹಚ್ಚಿದ ಕಾರಣಕ್ಕೆ ಲೈಸನ್ಸ್ ಇಲ್ಲದೆ ನಡೆಸುತ್ತಿರುವುದಾಗಿ ಹೇಳಿ ಪೊಲೀಸ್ ಕಾನ್ಸಸ್ಟೇಬಲ್ ಹೂಗಾರ 50,000 ರೂಪಾಯಿಗಳ ಬೇಡಿಕೆ ಇಟ್ಟು ಈಗಾಗಲೇ 30,000 ರೂಪಾಯಿ ಪಡೆದುಕೊಂಡಿದ್ದು ಇನ್ನುಳಿದ 20,000 ರೂಪಾಯಿಗಳ ಲಂಚ ಹಣವನ್ನು ಚಡಚಣ ಪ್ರವಾಸಿ ಮಂದಿರದಲ್ಲಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ಕ ಪೊಲೀಸರು ಹಠಾತ್ ದಾಳಿ ನಡೆಸಿ ಬಂಧಿಸಿದ್ದಾರೆ.
ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಸುರೇಶ ರೆಡ್ಡಿ, ಎಂ.ಎಸ್. ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆನಂದ ಟಕ್ಕನ್ನವರ್, ಆನಂದ ಡೋಣಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.