ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
63 ಕಡೆಗಳಲ್ಲಿ 13 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾದಾಳಿ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ನಡೆದಿದೆ. ಬೆಸ್ಕಾಂ ಜಾಗೃತ ದಳ ಅಧಿಕಾರಿ ಟಿ.ಎನ್. ಸುಧಾಕರ್ ರೆಡ್ಡಿ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಕೃಷ್ಣಮೂರ್ತಿ ಮನೆ, ಕುಂಬಳಗೋಡು-ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೆ ದಾಳಿ ಮಾಡಲಾಗಿದೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ ಒಟ್ಟಾರೆ 12ಕಡೆ ಪರಿಶೀಲನೆ ನಡೆಸಲಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಐಜಿಪಿ ಸುಬ್ರಮಣೀಶ್ವರ ರಾವ್, ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿಎಸ್‌ಪಿ ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಲ್ಲಿ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪತ್ನಿಯ ಸಹೋದರ, ಯಾದಗಿರಿ ಡಿಎಚ್‌ಒ ಡಾ. ಪ್ರಭುಲಿಂಗ್ ಮಾನಕರ್ ಅವರ ನಿವಾಸದ ಮೇಲೆಯೂ ದಾಳಿಯಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.