ಕೊಡಗಿನಿಂದ ಕಡಬಕ್ಕೆ ಬಂದ ಜಯಣ್ಣಗೂ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಪಂಚಾಯತ್‌ಗೂ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆ ಸಂಗ್ರಹ ಮುಂದುವರಿಸಿದ್ದಾರೆ.

ಕಡಬ ತಾಲೂಕು ಪಂಚಾಯತ್ ನೂತನ ಕಾರ್ಯನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ, ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯತ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಕ್ರಮ ಅಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಲ್ಲಿಗೆ ತನಿಖೆಗಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆಯಲ್ಲಿ ಜಯಣ್ಣ ಅವರಿಗೆ ಸೇರಿದ ಮನೆಯ ಮೇಲೆಯೂ ದಾಳಿ ನಡೆದಿದೆ. ಜಯಣ್ಣ ಅವರು ವಾಸ್ತವ್ಯ ಇದ್ದ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರದ ಬಾಡಿಗೆ ಮನೆಗೆ ಮುಂಜಾನೆ ಆಗಮಿಸಿದ ಲೋಕಾಯುಕ್ತ ಪೊಲೀಸರು ಜಯಣ್ಣ ಅವರನ್ನು ಕಡಬ ತಾಲೂಕು ಪಂಚಾಯತ್ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬಂದಿಗಳು ಕಡಬದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!