ಆಹಾರ ಸುರಕ್ಷಾ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ

ಹೊಸ ದಿಗಂತ ವರದಿ,ದಾವಣಗೆರೆ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಆಹಾರ ಸುರಕ್ಷಾ ಶಾಖೆ ಅಧಿಕಾರಿ ಮನೆ, ಕಚೇರಿ ಸೇರಿದಂತೆ 5 ಕಡೆ ಗುರುವಾರ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿ ಡಾ.ನಾಗರಾಜ್ ಮನೆ, ಕಚೇರಿ ಇತರೆ ಮೂರು ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕಲಾವತಿ, ಇನ್ಸಪೆಕ್ಟರ್ ಗಳಾದ ಪಿ.ವಿ.ಪ್ರಭು, ಸರಳಾ ನಾಗರಾಜ್ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿದವು.

ದಾಳಿ ವೇಳೆ ಆಹಾರ ಸುರಕ್ಷಾ ಅಧಿಕಾರಿ ಡಾ.ನಾಗರಾಜ್ ಮನೆಯಲ್ಲಿ 1 ನಿವೇಶನ, 4 ಮನೆ, 38 ಎಕರೆ ಜಮೀನು, 1 ಕೆಜಿ 597 ಗ್ರಾಂ ಚಿನ್ನಾಭರಣ, 5 ಕೆಜಿ 249 ಗ್ರಾಂ ಬೆಳ್ಳಿಯ ವಸ್ತು, 38 ಲಕ್ಷ ರೂ. ಮೌಲ್ಯದ ಕಾರು, ದ್ವಿಚಕ್ರ ವಾಹನ, 32 ಲಕ್ಷ ರೂ. ಮೌಲ್ಯದ ಇತರೆ ಸ್ವತ್ತುಗಳನ್ನು ಸದ್ಯ ಪತ್ತೆ ಮಾಡಲಾಗಿದೆ. ಬ್ಯಾಂಕ್ ಲಾಕರ್ ಇತರೆ ಕಡೆ ಪರಿಶೀಲನೆ ಕಾರ್ಯವನ್ನು ಗುರುವಾರ ರಾತ್ರಿಯೂ ಲೋಕಾಯುಕ್ತ ತಂಡಗಳು ಮುಂದುವರೆಸಿವೆ.

ಇಲ್ಲಿನ ಜಿಲ್ಲಾಸ್ಪತ್ರೆ ಆವರಣದ ಸರ್ವೇಕ್ಷಣಾ ವಿಭಾಗದ ಕಟ್ಟಡದಲ್ಲಿರುವ ಆಹಾರ ಸುರಕ್ಷಾ ಶಾಖೆಯಲ್ಲಿ ಡಾ.ನಾಗರಾಜ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲೂ ಕೂಡ ರೆಫ್ರಿಜಿರೇಟರ್ ನಲ್ಲಿ ಕೊಳೆತು ಹೋಗುತ್ತಿರುವ ಆಹಾರ ಮಾದರಿಗಳು ಪತ್ತೆಯಾಗಿವೆ. ಉಪ್ಪಿಟ್ಟು, ದೋಸೆ, ಪೂರಿ, ಪಲಾವ್ ಸೇರಿದಂತೆ ಹತ್ತಾರು ಆಹಾರ ಪದಾರ್ಥಗಳನ್ನು ಸ್ಯಾಂಪಲ್ ಗೆಂದು ತಂದಿದ್ದು, ಅದಕ್ಕೆ ಯಾವುದೇ ದಾಖಲೆಯನ್ನೂ ನಿರ್ವಹಣೆ ಮಾಡಿರಲಿಲ್ಲ. ಕಸದ ಬುಟ್ಟಿಯಲ್ಲಿ ತುಂಬಿದoತೆ ಆಹಾರದ ಮಾದರಿಗಳನ್ನು ತುಂಬಿಟ್ಟಿರುವುದು ಹಾಗೂ ಹತ್ತಾರು ಕಲಬೆರಕೆ ಪ್ರಕರಣಗಳಿದ್ದರೂ ಕ್ರಮ ಕೈಗೊಳ್ಳದ ಕುರಿತು ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆಹಾರ ಸುರಕ್ಷಾ ಅಧಿಕಾರಿ ಡಾ.ನಾಗರಾಜ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ. ಒಟ್ಟಾರೆ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ, ನಗದು, ಸ್ವತ್ತು, ವಾಹನ, ನಿವೇಶನ, ಮನೆ, ಜಮೀನು ಕಾಗದ ಪತ್ರಗಳನ್ನು ಪತ್ತೆ ಮಾಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!