ಹೊಸದಿಗಂತ ವರದಿ ಬೆಂಗಳೂರು:
ಪ್ರಜ್ಞಾ ಪ್ರವಾಹ ವೇದಿಕೆಯು ಸೆ.22 ರಿಂದ 24 ರವರೆಗೆ ಅಸ್ಸಾಂನ ಗುವಾಹಟಿಯಲ್ಲಿ ಲೋಕ ಮಂಥನ್ – 2022 ಆಯೋಜಿಸಿದೆ.
ಸಂಸ್ಕಾರ ಭಾರತಿ, ವಿಜ್ಞಾನ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಇತಿಹಾಸ ಸಂಕಲನ ಸಮಿತಿ ಮತ್ತು ವನವಾಸಿ ಕಲ್ಯಾಣ ಆಶ್ರಮದಂತಹ ಸಮಾನ ಮನಸ್ಕ ಬೌದ್ಧಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ರಾಷ್ಟ್ರ ಮೊದಲು ಎನ್ನುವ ಚಿಂತಕರು ಮತ್ತು ಅದನ್ನು ಅಳವಡಿಸಿಕೊಂಡವರನ್ನು ಸಂಯೋಜಿಸಿ ನಡೆಸುತ್ತಿರುವ ಈ ಲೋಕಮಂಥನ್‌ನ ಮೂರನೇ ಆವೃತ್ತಿ ಇದಾಗಿದೆ.
ಈ ಬಾರಿಯ ವಿಷಯ ಲೋಕಪರಂಪರಾ (ಜನಪದ ಸಂಪ್ರದಾಯಗಳು). ಎನಪದ ಸಂಪ್ರದಾಯಗಳು ನಮ್ಮ ಸಾಂಸ್ಕೃತಿಕ ಪ್ರಜ್ಞೆಯನ್ನು ಹೇಗೆ ಅಖಂಡವಾಗಿಸಿಕೊಂಡಿವೆ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಭಾವನೆಯಲ್ಲಿ ನಮ್ಮನ್ನು ಬಲಪಡಿಸಿವೆ ಎಂಬುದನ್ನು ಇದು ಚರ್ಚಿಸಲಿದೆ ಎಂದು ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಉಪರಾಷ್ಟ್ರಪತಿಯವರಿಂದ ಚಾಲನೆ
ಸೆ.22 ರಂದು ಬೆಳಗ್ಗೆ 10 ಗಂಟೆಗೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಈ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಖ್ಯ ಅತಿಥಿಗಳಾಗಿದ್ದಾರೆ. ಡಾ. ಕಪಿಲ್ ತಿವಾರಿ ಮತ್ತು ಮೃದುಸ್ಮಿತಾ ದಾಸ್ ಬೋರಾ ಆಶಯ ಭಾಷಣ ಮಾಡಲಿದ್ದಾರೆ. ಸೆ.24 ರಂದು ಮಧ್ಯಾಹ್ನ 2 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಲೋಕಮಂಥನದ ಮೊದಲ ಆವೃತ್ತಿ 2016 ರಲ್ಲಿ ಭೋಪಾಲ್ ಮತ್ತು ಎರಡನೇ ಆವೃತ್ತಿ 2018ರಲ್ಲಿ ರಾಂಚಿಯಲ್ಲಿ ನಡೆದಿತ್ತು. ಲೋಕಮಂಥನವು ದೇಶದ ವಿವಿಧ ಭಾಗಗಳ ಕಲಾವಿದರು, ರಾಷ್ಟ್ರೀಯ ಚಿಂತಕರು ಮತ್ತು ಶಿಕ್ಷಣತಜ್ಞರು ಒಗ್ಗೂಡಿ ಸಮಾಜವನ್ನು ಕಾಡುವ ಪ್ರಶ್ನೆಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ಬಾರಿಯ ಮೂರು ದಿನಗಳ ಕಾರ್ಯಕ್ರಮವು ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಚರ್ಚೆಗಳು, ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ಹೊಂದಿದೆ. ಬೌದ್ಧಿಕ, ಸಾಂಸ್ಕೃತಿಕ ಮತ್ತು ತತ್ತ್ವಜ್ಞಾನದ ನಡುವಿನ ಅಂತರವನ್ನೇ ರಾಷ್ಟ್ರ ಒಡೆಯಲು ಬಳಸುತ್ತಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ಈ ಲೋಕಮಂಥನ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಾದ್ಯಂತ 432 ಮುಕ್ತ ಪ್ರತಿನಿಧಿಗಳು, 412 ಕಲಾಕಾರರು, 33 ಭಾಷಣಕಾರರು, 30 ಗಣ್ಯರು ಸೇರಿದಂತೆ 1043 ಮಂದಿ ಭಾಗವಹಿಸುತ್ತಾರೆ ಎಂದು ಪ್ರಜ್ಞಾಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ರಘುನಂದನ್ ತಿಳಿಸಿದರು.
ಯಕ್ಷಗಾನ ಪ್ರದರ್ಶನವೂ ಇರಲಿದೆ
ಲೋಕಮಂಥನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಯಕ್ಷಗಾನ ಪ್ರದರ್ಶನವಾಗಲಿದೆ. ಅಲ್ಲದೇ ಹಿರಿಯ ಕಲಾವಿದೆ ಮಂಜಮ್ಮ ಜೋಗತಿ ನೇತೃತ್ವದಲ್ಲಿ ಜೋಗತಿ ನೃತ್ಯವೂ ಲೋಕಮಂಥನದಲ್ಲಿ ಪ್ರದರ್ಶನಗೊಳ್ಳಲಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ 60 ತಂಡಗಳು ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.
ಸಾರ್ವಜನಿಕರಿಗೆ ಮುಕ್ತ ಜನಪದ ಪ್ರದರ್ಶನ
ಲೋಕಪರಂಪರಾ ಹೆಸರಿನಲ್ಲಿ ಸೆ.21 ರಿಂದ ನಾಲ್ಕು ದಿನಗಳ ಕಾಲ ಗುವಾಹಟಿಯ ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿ ಜನಪದ ಪ್ರದರ್ಶನಿ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಅಸ್ಸಾಂನ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಬಿಮಲ್ ಬೋರಾ ಈ ಪ್ರದರ್ಶನಿ ಉದ್ಘಾಟಿಸಲಿದ್ದಾರೆ. ಬಳಿಕ ಈಶಾನ್ಯ ರಾಜ್ಯದ ಸಮುದಾಯಗಳ ಸಾಂಸ್ಕೃತಿಕ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ಪ್ರದರ್ಶನಿಯಲ್ಲಿ ಈಶಾನ್ಯ ಸಮುದಾಯಗಳ ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯ, ಕಲೆ ಇತ್ಯಾದಿಗಳ ಪ್ರದರ್ಶನ ನಡೆಯಲಿದೆ. ಸುಮಾರು 1 ಲಕ್ಷ ಜನರು ವೀಕ್ಷಿಸುವ ನಿರೀಕ್ಷೆಯಿದೆ.