ಹೊಸದಿಗಂತ ವರದಿ, ಮಂಡ್ಯ/ಶ್ರೀರಂಗಪಟ್ಟಣ :
ಅಹಿಂದ ಹೆಸರೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅದೇ ಅಹಿಂದ ಸಮುದಾಯಕ್ಕೆ ಸೇರಿದ್ದ ಹಣವನ್ನು ಲೂಟಿ ಮಾಡಿ ಆರೋಪವನ್ನ ತಾವೆ ಹೊತ್ತಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.
ಪಟ್ಟಣದ ಪ್ರಮುಖ ವೃತ್ತದಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಿನ ಜನರು ಕೇಳಿರುವ ವಾಲ್ಮಿಖಿ, ಮೂಡ ಹಗರಣದಲ್ಲಿ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಉತ್ತರಕೊಡಲು ಸಾಧ್ಯವಾಗದೆ ಅಧಿವೇಶನವನ್ನ ಮೊಟಕುಗೊಳಿಸಿ ಓಡಿಹೋದಂತೆ ಯಾರಾದರೂ ಮುಖ್ಯ ಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ವಿರೋದಪಕ್ಷದವರ ಮಂಡನೆ ಮಾಡಿರುವ ನಿಲುವಳಿ ಸೂಚನೆಗೆ ಉತ್ತರಕೊಡದೆ ಓಡಿಹೋದಂತೆ ಅಪಕೀರ್ತಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೈಕೊಟ್ಟ ವಿದ್ಯುತ್ : ಪಟ್ಟಣದ ಹೆದ್ದಾರಿಯಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯವಾಗಿದೆ. ಈ ವೇಳೆ ನಿಖಿಲ್ ಕುಮಾರಸ್ವಾಮಿ ಮೈಕ್ ಹಿಡಿದು ಮಾತನಾಡಿ, ಪಟ್ಟಣದ ಎಲ್ಲಾ ಕಡೆ ವಿದ್ಯುತ್ ಇದ್ದು, ಕೇವಲ ಈ ಸ್ಥಳದಲ್ಲಿ ಮಾತ್ರ ವಿದ್ಯುತ್ ಕಟ್ ಮಾಡುವಂತಹ ಕುತಂತ್ರ ರಾಜಕಾರಣ, ಪಾದಯಾತ್ರೆಗೆ ತೊಂದರೆ ಕೊಡುವ ಕೆಲಸಗಳಿಗೆ ನಾವು ಹೆದುರುವುದಿಲ್ಲ ಎಂದು ಹರಿಹಾಯ್ದರು.