ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ: ಮಡಿಕೇರಿಯಲ್ಲಿ ದೀಪೋತ್ಸವ ಆಚರಿಸಲು ಕರೆ

ಹೊಸ ದಿಗಂತ ವರದಿ,ಮಡಿಕೇರಿ:

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನೆಯ ದಿನವಾದ ಜ.22 ರಂದು ಸೂರ್ಯಾಸ್ತವಾದ ನಂತರ ಪ್ರತಿ ಮನೆಯಲ್ಲಿ ದೀಪ ಬೆಳಗಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ದೀಪೋತ್ಸವ ಆಚರಿಸಲು ವಿಶ್ವ ಹಿಂದೂ ಪರಿಷತ್’ನ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಕ್ಷೇತ್ರ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ಹೆಗ್ಗಡೆ ಕರೆ ನೀಡಿದ್ದಾರೆ.

ನಗರದ ಓಂಕಾರ ಸದನದಲ್ಲಿ ವಿಶ್ವ ಹಿಂದೂ ಪರಿಷತ್’ನ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಅಯೋಧ್ಯೆಯ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಯೋಧ್ಯೆ ನಗರಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಮುಂದಿನ ವರ್ಷ ಜನವರಿ 22 ರಂದು ಶ್ರೀರಾಮನ ಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಗಳಿಗೆ ತಲುಪಿಸಲು ಅಯೋಧ್ಯೆಯಿಂದ ಕರ್ನಾಟಕಕ್ಕೆ ಮಂತ್ರಾಕ್ಷತೆಯನ್ನು ತರಲಾಗಿದೆ. ಹಿಂದೂ ಕಾರ್ಯಕರ್ತರು ಕೊಡಗು ಜಿಲ್ಲೆಯ ಮನೆಮನೆಗಳಿಗೆ ರಾಮನ ಭಾವಚಿತ್ರ ಮತ್ತು ಮಂತ್ರಾಕ್ಷತೆಯನ್ನು ಹಂಚಲಿದ್ದಾರೆ ಎಂದರು.

ಧರ್ಮ ಜಾಗರಣಾ ಪ್ರಾಂತ ಸಂಯೋಜಕ ಹರ್ಷವರ್ಧನ್ ಮಾತನಾಡಿ, ಕೋಟಿ ಕೋಟಿ ಹಿಂದೂಗಳ ಹಲವು ವರ್ಷಗಳ ಕನಸು ನನಸಾಗುತ್ತಿದ್ದು, ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿ ಶ್ರೀರಾಮನ ಸ್ಮರಣೆ ಮಾಡುವಂತೆ ಕರೆ ನೀಡಿದರು.

ವಿಶ್ವ ಹಿಂದೂ ಪರಿಷತ್’ನ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಮಾತನಾಡಿ, ಪ್ರತಿ ಮನೆಗೂ ಆಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸಲು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ. ಮಂತ್ರಾಕ್ಷತೆಯನ್ನು ಸಂಘ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರ ಮೂಲಕ ಕೊಡಗಿನ ಪ್ರತಿ ಮನೆಗಳಿಗೆ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಮನೆಗಳಿಗೆ ಹಂಚಿಕೆ ಮಾಡಲು ವಿಹೆಚ್‍ಪಿ ಹಾಗೂ ಸಂಘ ಪರಿವಾರದ ಪ್ರಮುಖರಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.

ವಿಹೆಚ್‍ಪಿ, ಸಂಘ ಪರಿವಾರ, ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ನಗರಸಭಾ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!