ಹೊಸದಿಗಂತ ವರದಿ, ಅಂಕೋಲಾ:
ಭಾರೀ ಗಾತ್ರದ ಲಾರಿಗಳ ಮುಖಾಮುಖಿ ಡಿಕ್ಕಿಯಿಂದಾಗಿ ಅಂಕೋಲಾ ಹುಬ್ಬಳ್ಳಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಶುಕ್ರವಾರ ಮದ್ಯಾಹ್ನ ಸಂಭವಿಸಿದೆ.
ಮಂಗಳೂರಿನಿಂದ ಮುಂಬೈಗೆ ಯಂತ್ರ ಸಾಗಿಸುವ ಟ್ರಾಲಿ ಲಾರಿಗೆ ಬಳ್ಳಾರಿಯಿಂದ ಗೋವಾಕ್ಕೆ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಲಾರಿಗೆ ಸುಂಕಸಾಳ ಬಳಿ ಡಿಕ್ಕಿ ಹೊಡೆದು ಹೆದ್ದಾರಿಗೆ ಅಡ್ಡಲಾಗಿ ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಾಧ್ಯವಾಗದೆ ಹಲವು ಕಿಲೊಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೊಡ್ಡ ಕ್ರೇನ್ ಬಳಸಿ ಅಪಘಾತಗೊಂಡ ವಾಹನಗಳನ್ನು ತೆರುವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಅಪಘಾತದಿಂದ ಯಾರಿಗೂ ಹೆಚ್ಚಿನ ಗಾಯಗಳು ಆಗದಿದ್ದರೂ ಸುಮಾರು ಮೂರು ಗಂಟೆಗಳ ಸಂಚಾರ ತಡೆಯಿಂದಾಗಿ ವಾಹನ ಚಾಲಕರು ತುರ್ತು ಕೆಲಸದ ಮೇಲೆ ತೆರಳಬೇಕಿದ್ದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಯಿತು.
ಅಂಕೋಲಾ ತಾಲೂಕಿನ ಬಾಳೇಗುಳಿಯಿಂದ ಯಲ್ಲಾಪುರದ ಅರಬೈಲ್, ಆರ್ತಿಬೈಲ್ ಘಟ್ಟದ ವರೆಗೆ ರಾಷ್ಟ್ರೀಯ ಹೆದ್ದಾರಿಯ 63 ರಲ್ಲಿ ಪದೇ ಪದೇ ಸಂಭವಿಸುವ ಅಪಘಾತಗಳಿಂದ ರಸ್ತೆ ತಡೆ ಉಂಟಾಗುತ್ತಿದ್ದು ವಾಹನ ಚಾಲಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಅಪಘಾತ ಸ್ಥಳದಲ್ಲಿ ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಗಮನ ಹರಿಸಿ ಕೆಟ್ಟು ಹೋದ ಹೊಂಡಮಯ ರಸ್ತೆಗಳ ದುರುಸ್ಥಿಗೆ ಕ್ರಮ ಕೈಗೊಳ್ಳಬೇಕು ಪದೇ ಪದೇ ಅಪಘಾತ ಸಂಭವಿಸುತ್ತಿರುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ಕಂಡು ಹಿಡಿದು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.