ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಏಂಜಲಿಸ್ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚು ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಲಾಸ್ ಏಂಜಲಿಸ್ ವೆಸ್ಟ್ ಹಿಲ್ಸ್ ಪ್ರದೇಶಕ್ಕೂ ಕಾಳ್ಗಿಚ್ಚು ವ್ಯಾಪಕವಾಗಿ ಹಬ್ಬಿದ್ದು, ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಈಗಾಗಲೇ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದ ನೆರಹೊರೆಯನ್ನು ಆವರಿಸಿದ್ದು, 19,000 ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಅಲ್ಟಾಡೆನಾದಲ್ಲಿ 13,000 ಎಕರೆ ಪ್ರದೇಶ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ನಿಯಂತ್ರಿಸಲು ಅಮೆರಿಕ ಕ್ಯಾಲಿಫೋರ್ನಿಯಾದ ನ್ಯಾಷನಲ್ ಗಾರ್ಡ್ ತಂಡವನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
ಲಾಸ್ ಏಂಜಲೀಸ್ ನಗರಾದ್ಯಂತ ರಾಷ್ಟ್ರೀಯ ಪ್ರಶಸ್ತಿ, ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟರ ಮನೆಗಳು ಸುಟ್ಟು ಕರಕಲಾಗಿವೆ. ಒಟ್ಟಾರೆ 9,000ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.