ಹೊಸದಿಗಂತ ವರದಿ,ಬಳ್ಳಾರಿ:
ಕಾಂಗ್ರೆಸ್ ನ ದುರಾಡಳಿತ, ಆಡಳಿತ ವೈಫಲ್ಯ, ಸಾಲು ಸಾಲು ಹಗರಣಗಳು ಕಾಂಗ್ರೆಸ್ ಸರ್ಕಾರದ ಸಾಧನೆಗಳಾಗಿವೆ ಎಂದು ಗಂಗಾವತಿ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿರುಗುಪ್ಪ ರಸ್ತೆಯ ಗಾಲಿ ಜನಾರ್ಧನ ರೆಡ್ಡಿ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪ ಚುನಾವಣೆ ಹಿನ್ನೆಲೆ ಸಂಡೂರು ಕ್ಷೇತ್ರದ ಯಾವುದೇ ಗ್ರಾಮಕ್ಕೆ ತೆರಳಿದರೂ ಜನರು ನಾನಾ ಸಮಸ್ಯೆಗಳನ್ನು ಮುಂದಿಡುತ್ತಿದ್ದಾರೆ, ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ ಕಾಂಗ್ರೆಸ್ ನ ಸoಸದ ಈ ತುಕಾರಾಂ ಅವರಿಗೆ ಕ್ಷೇತ್ರದ ಅಭಿವೃದ್ದಿ ಬಗ್ಗೆ ಹಾಗೂ ಕ್ಷೇತ್ರದ ಜನರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ, ಆಸಕ್ತಿಯಿದೆ ಎಂಬುದು ಸಾಬೀತಾಗಿದೆ. ಪ್ರಮುಖವಾಗಿ ಶುದ್ಧ ಕುಡಿವ ನೀರು, ಸ್ವಚ್ಚತೆ, ಚರಂಡಿ ವ್ಯವಸ್ಥೆ, ರಸ್ತೆ, ಮುಖ್ಯವಾಗಿ ಧೂಳಿನ ಸಮಸ್ಯೆ ಕುರಿತು ಜನ ಬೇಸತ್ತಿದ್ದು, ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಸ್ವಯಂ ಪ್ರೇರಿತವಾಗಿ ಕ್ಷೇತ್ರದ ಅನೇಕ ಮುಖಂಡರು, ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ, ಈ ಬಾರಿ ಕೈ ನಾಯಕರು ಎಷ್ಟೇ ಕಸರತ್ತು ನಡೆಸಿದರು ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ದರೋಜಿ ಗ್ರಾಮದ ಮಾಹೇಬೂಬ್ ಭಾಷಾ, ಅಂಜನಿ, ಅಳದಪ್ಪ, ತಿಮ್ಮಪ್ಪ, ಯು.ಹೊನ್ನೂರು ಸ್ವಾಮಿ, ನಾಗರಾಜ್, ಕಾಳಪ್ಪ,ಇಂದ್ರಿ ಮೌಲಾ, ಬೆಂಬಲಿಗರು, ಇಸೂಸಾಬ್ ಹಾಗೂ ಕೆ.ಗೋವಿಂದಪ್ಪ ಹಾಗೂ ಅವರ ಬೆಂಬಲಿಗರು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಮಾಜಿ ಶಾಸಕ ರಾಮಚಂದ್ರ ರೆಡ್ಡಿ, ಗಂಗಾವತಿ ಮುಖಂಡರಾದ ಯಮನೂರ್ ಚೌಡಕಿ, ನಾಗರಾಜ್ ಚಳಗೇರಿ, ಸೇರಿದಂತೆ ಹುಂಡೆಕರ್ ರಾಜೇಶ್ ಇತರರು ಇದ್ದರು.