ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಂದ ಶನಿವಾರ ಮಂಗಳೂರುನಲ್ಲಿ ಬೃಹತ್ ರೋಡ್ ಶೋ ನಡೆಯಿತು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಅವರ ಪರ ನಗರದಲ್ಲಿ ಶನಿವಾರ ಬೃಹತ್ ರೋಡ್ ಶೋ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ವಿಶ್ವಾಸವನ್ನು ತುಂಬಿದರು.
ನಗರದ ಪುರಭವನದ ಆವರಣದಿಂದ ಆರಂಭಗೊಂಡ ರೋಡ್ ಶೋ ಹಂಪನಕಟ್ಟೆ ವೃತ್ತ, ಕೆ.ಎಸ್.ರಾವ್ ರಸ್ತೆ ಮೂಲಕ ಸಾಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದಲ್ಲಿ ಸಮಾಪನಗೊಂಡಿತು. ರೋಡ್ ಶೋ ನಡೆದ ದಾರಿಯ ಉದ್ದಕ್ಕೂ ನಿಂತ ಸಹಸ್ರಾರು ಜನರತ್ತ ಕೈ ಬೀಸುತ್ತಾ, ಮುಗುಳ್ನಗುತ್ತಾ ಅಮಿತ್ ಶಾ ತೆರೆದ ವಾಹನದಲ್ಲಿ ಸಾಗಿ ಬಂದರು.
ರೋಡ್ ಶೋ ಉದ್ದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ಕುಮಾರ್ ಕಟೀಲು, ಅಭ್ಯರ್ಥಿ ವೇದವ್ಯಾಸ ಕಾಮತ್ ಅವರಿಗೆ ಕಾರ್ಯಕರ್ತರು ಜಯಘೋಷ ಕೂಗಿದರು. ಬಿಜೆಪಿಯ ಬೃಹತ್ ಧ್ವಜ ಹಾಗೂ ಕೇಸರಿ ಧ್ವಜಗಳನ್ನು ಹಿಡಿದು ಹಾರಾಡಿಸುತ್ತಾ ರೋಡ್ ಶೋ ಉದ್ದಕ್ಕೂ ಕಾರ್ಯಕರ್ತರು ಉಲ್ಲಾಸಭರಿತರಾಗಿ ಸಾಗಿದರು.