ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿಯಾಚೆಗಿನ ಡ್ರಗ್ಸ್ ದಂಧೆಗೆ ಎಂಟ್ರಿ ಕೊಡಲು ಪಾಕಿಸ್ತಾನದ ಹ್ಯಾಂಡ್ಲರ್ ನೀಡಿದ ‘ಟಾಸ್ಕ್’ಗೆ ಪಂಜಾಬ್‌ನ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಪಂಜಾಬ್ ಪೊಲೀಸ್ ಇಲಾಖೆಯ ಎಎಸ್‌ಐ ಹರ್ಜಿತ್ ಸಿಂಗ್ ಅವರ ಹತ್ಯೆಯ ಹಿಂದೆ ಅಂತಾರಾಷ್ಟ್ರೀಯ ಸಂಚು ಇರುವುದು ಅಮೃತಸರ ಪೊಲೀಸ್ ಕಮಿಷನರ್ ಹರ್ಮನ್‌ಬೀರ್ ಸಿಂಗ್ ಗಿಲ್ ನಡೆಸಿದ ತನಿಖೆಯಿಂದ ಬಯಲಾಗಿದೆ.
ಏನಿದು ಘಟನೆ
ಪಾಕಿಸ್ತಾನದಲ್ಲಿ ಕುಳಿತಿರುವ ಡ್ರಗ್ಸ್ ದಂಧೆಯ ಮಾಸ್ಟರ್ ಮೈಂಡ್, ಭಾರತದ ಸ್ಥಳೀಯ ಕ್ರಿಮಿನಲ್‌ಗಳಿಗೆ ಹಣದ ಆಮಿಷ ಒಡ್ಡಿದ್ದ. ಆದರೆ ತನ್ನ ನೆಟ್‌ವರ್ಕ್‌ಗೆ ಸೇರಿಸಿಕೊಳ್ಳುವ ಮುನ್ನ ಅವರ ನಿಷ್ಠೆಯನ್ನು ಪರೀಕ್ಷಿಸಲು ಒಂದು ಶರತ್ತು ವಿಧಿಸಿದ್ದ. “ಒಂಟಿಯಾಗಿ ಸಿಗುವ ಯಾರಾದರೂ ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿ, ಆ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ನನಗೆ ವಿಡಿಯೋ ಕಳುಹಿಸಬೇಕು” ಎಂದು ಆದೇಶಿಸಿದ್ದ.
ಅದರಂತೆ ಸೆ. 17ರಂದು ರಾತ್ರಿ ಕಾವಲು ಕರ್ತವ್ಯದಲ್ಲಿದ್ದ ಎಎಸ್‌ಐ ಹರ್ಜಿತ್ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಷ್ಟೇ ಅಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಧಿಕಾರಿಯ ವಿಡಿಯೋ ಮಾಡಿ ಪಾಕಿಸ್ತಾನದ ಹ್ಯಾಂಡ್ಲರ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಎನ್‌ಕೌಂಟರ್‌ಗೆ ಒಬ್ಬ ಬಲಿ
ಈ ಘಟನೆ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪಂಜಾಬ್ ಪೊಲೀಸರು ತನಿಖೆ ಚುರುಕುಗೊಳಿಸಿ ಆಕಾಶ್‌ದೀಪ್ ಸಿಂಗ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಮುಖ್ಯ ಆರೋಪಿಯೊಬ್ಬ ಅಮೃತಸರದ ಥಾಂಡಾ ರಸ್ತೆಯ ಚೆಕ್‌ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನನ್ನು ತಡೆಯಲು ಯತ್ನಿಸಿದಾಗ ಆತ ನಾಲ್ಕು ಸುತ್ತು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಓಡಿಹೋಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ:
2 ಕೋಟಿ ಪರಿಹಾರ ಘೋಷಿಸಿದ ಸಿಎಂ
ಕರ್ತವ್ಯದ ಮೇಲಿದ್ದಾಗಲೇ ಹುತಾತ್ಮರಾದ ಎಎಸ್‌ಐ ಹರ್ಜಿತ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಒಟ್ಟು 2 ಕೋಟಿ ರೂಪಾಯಿ ಘೋಷಿಸಿದ್ದಾರೆ. ಇತ್ತ ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಸ್ತುತ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಪಾಕಿಸ್ತಾನಕ್ಕೆ ಕಳುಹಿಸಲಾದ ವಿಡಿಯೋ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.



