ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ದಾಳಿಗೆ ಎಡವಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ಗಳಿಸಿದ್ದು, ಪಂತ್ ಪಡೆಗೆ ಸಾಧಾರಣ ಗುರಿ ನೀಡಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಗೆ ಮೊದಲ ಓವರ್ನಲ್ಲೇ ಆಘಾತ ಎದುರಾಗಿದ್ದು, ಮೊಹಮ್ಮದ್ ಶಮಿ ಎಸೆದ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯದೇ ಔಟಾದರು. ಬಳಿಕ ಶಮಿ ಮುಂದಿನ ಓವರ್‌ನಲ್ಲಿ ಟ್ರಾವಿಸ್ ಹೆಡ್ 7 ರನ್ ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು. ನಾಯಕ ಇಶಾನ್ ಕಿಶನ್ 1 ರನ್ ಗೆ ನಿರಾಸೆ ಮೂಡಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ ಕೂಡ 14 ರನ್ಗಳಿಸಿ ತಂಡಕ್ಕೆ ಆಘಾತ ನೀಡಿದರು.
ಈ ಮೂಲಕ 26ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್ ಗೆ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಜೊತೆಗೂಡಿ 116 ರನ್ಗಳ ಜೊತೆಯಾಟ ನೀಡಿದರು.
33 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳ ಸಹಿತ 56 ರನ್ಗಳಿಸಿದ್ದ ರೆಡ್ಡಿ ಕ್ಯಾಚ್ ನೀಡಿ ಔಟ್ ಆದರು. ನಂತರದ ಓವರ್ನಲ್ಲೇ 41 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ಗಳ ಸಹಿತ 62 ರನ್ಗಳಿಸಿದ್ದ ಕ್ಲಾಸೆನ್ ಆವೇಶ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಪಂತ್ ಹಿಡಿದ ಕ್ಯಾಚ್‌ಗೆ ಬಲಿಯಾದರು.ಅಂತಿಮವಾಗಿ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು.



