ಗೋವುಗಳ ಜೀವ ತೆಗೆಯುತ್ತಿದೆ ಮಾರಕ ಲಂಪಿ ಚರ್ಮರೋಗ: ರಾಜಸ್ಥಾನದಲ್ಲಿ 12 ಸಾವಿರಕ್ಕೂ ಹೆಚ್ಚು ಜಾನುವಾರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ರಾಜಸ್ಥಾನದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಲಂಪಿ ವೈರಸ್‌ ಚರ್ಮದ ಸೋಂಕು 12,800 ಕ್ಕೂ ಹೆಚ್ಚು ಗೋವುಗಳ ಜೀವ ತೆಗೆದಿದೆ. ಅಕ್ಕರೆಯಿಂದ ಸಾಕಿ ಬೆಳೆಸಿದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ರೈತರು ಕಣ್ಣೀರಿಡುತ್ತಿದ್ದಾರೆ.
ಸೋಂಕು ಮತ್ತಷ್ಟು ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ಪ್ರಾಣಿ ಸಂತೆ ನಡೆಸುವುದನ್ನು ನಿಷೇಧಿಸಿದೆ.
ಶ್ರೀ ಗಂಗಾನಗರದಲ್ಲಿ ಗರಿಷ್ಠ 2,511 ಜಾನುವಾರುಗಳ ಸಾವುಗಳು ವರದಿಯಾಗಿವೆ. ನಂತರ ಬಾರ್ಮರ್‌ನಲ್ಲಿ 1,619, ಜೋಧ್‌ಪುರದಲ್ಲಿ 1,581, ಬಿಕಾನೇರ್‌ನಲ್ಲಿ 1,156, ಜಾಲೋರ್‌ನಲ್ಲಿ 1,150 ಮತ್ತು ಜಾಲೋರ್‌ನಲ್ಲಿ 1,138 ಸಾವುಗಳು ವರದಿಯಾಗಿವೆ.
“ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಐದು ಜಿಲ್ಲೆಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಪಿಸಿ ಕಿಶನ್ ತಿಳಿಸಿದ್ದಾರೆ.
ಇಲಾಖೆಯ ಪ್ರಕಾರ, ಒಟ್ಟು 2,81,484 ಪ್ರಾಣಿಗಳು ರೋಗದಿಂದ ಬಾಧಿತವಾಗಿವೆ ಮತ್ತು 2,41,685 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ. ರಾಜ್ಯದಲ್ಲಿ ರೋಗ ಹರಡುವುದನ್ನು ಪರಿಗಣಿಸಿ, ರಾಜ್ಯ ಸರ್ಕಾರವು ರಾಜಸ್ಥಾನದಲ್ಲಿ ಪ್ರಾಣಿ ಸಂತೆಗಳನ್ನು ಆಯೋಜಿಸುವುದನ್ನು ನಿಷೇಧಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜಾನಯವಾರುಗಳ ಶವ ಸುರಕ್ಷಿತ ವಿಲೇವಾರಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.ಪರಿಸ್ಥಿತಿಯನ್ನು ನಿಭಾಯಿಸುವ ಕ್ರಮಗಳ ಭಾಗವಾಗಿ, ರಾಜಸ್ಥಾನ ಸರ್ಕಾರವು 500 ಹುದ್ದೆಗಳಲ್ಲಿ ತಾತ್ಕಾಲಿಕ ಸಿಬ್ಬಂದಿಯನ್ನು ಶೀಘ್ರವಾಗಿ ನೇಮಿಸಿಕೊಳ್ಳಲು ಅನುಮೋದನೆ ನೀಡಿದೆ. ಇವರಲ್ಲಿ 200 ಪಶುವೈದ್ಯರು ಮತ್ತು 300 ಜಾನುವಾರು ಸಹಾಯಕರು ಸೇರಿದ್ದಾರೆ.
ಪಶುಸಂಗೋಪನಾ ಇಲಾಖೆ ಸಚಿವ ಲಾಲ್ ಚಂದ್ ಕಟಾರಿಯಾ ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!