ಹೊಸ ದಿಗಂತ ವರದಿ, ಹುಬ್ಬಳ್ಳಿ:
ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಹಾಗೂ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣದಲ್ಲಿ ಕಡಿಮೆ ದರಕ್ಕೆ ಊಟ, ಉಪಹಾರ ಹಾಗೂ ನೀರು ನೀಡುವ ಕಾರ್ಯಕ್ರಮ ನೈರುತ್ಯ ರೈಲ್ವೆ ಇಲಾಖೆಯ ಆರಂಭಿಸಿದೆ.
ರೈಲ್ವೆ ನಿಲ್ದಾಣದಲ್ಲಿ ಈ ಮೊದಲು ಹೆಚ್ಚಿನ ಬೆಲೆ ಉಪಹಾರ, ಊಟ ದೊರೆಯುತ್ತಿತ್ತು. ಇದು ಸಾಮಾನ್ಯ ಹಾಗೂ ಬಡಜನರಿಗೆ ಹೊರೆಯು ಸಹ ಆಗಿತ್ತು. ಅನಿವಾರ್ಯ ಕಾರಣದಿಂದ ಪ್ರಯಾಣಿಕರ ಬೆಲೆ ಹೆಚ್ಚಾದರೂ ಖರೀದಿಸಿ ಹಸಿವು ನಿಗಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ರೈಲ್ವೆ ಮಂಡಳಿಯು ಕಡಿಮೆ ಬೆಲೆ ಆಹಾರ ನೀಡಲು ಸೂಚಿಸಿದ್ದು, ಐಆರ್ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಕೌಂಟರ್ಗಳಲ್ಲಿ ಪ್ರಯಾಣಿಕರಿಗೆ ಊಟದ ಪೊಟ್ಟಣ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಕಾರ್ಯಕ್ರಮ 6 ತಿಂಗಳ ಅವಗೆ ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ.
ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್ಫಾರ್ಮ್ ಬಳಿಯಲ್ಲಿ ನೀಡುವ ಯೋಜನೆಯನ್ನು ಒದಗಿಸುವಂತೆ ರೈಲ್ವೆ ಮಂಡಳಿಯು ಸೂಚಿಸಿದೆ. ನಿಲ್ದಾಣದ ಸೇವಾ ಕೌಂಟರ್ಗಳಲ್ಲಿ ಎರಡು ವಿಧದ ಊಟದ ಪ್ಯಾಕೇಜ್ಗಳಿರುತ್ತದೆ.
1ನೇ ಪ್ಯಾಕೇಜ್ನಲ್ಲಿ – ಎಕಾನಮಿ ಮೀಲ್ -7ಪೂರಿ (175 ಗ್ರಾಂ), ಆಲೂ ಬಾಜಿ (150 ಗ್ರಾಂ), ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿದ್ದು, ಇದಕ್ಕೆ 20 ರೂ. ದರ ಮಾಡಲಾಗಿದೆ. 2ನೇ ಪ್ಯಾಕೇಜ್ನಲ್ಲಿ ತಿಂಡಿ ಊಟ (350 ಗ್ರಾಂ) ಅನ್ನ, ರಾಜ್ಮಾ, ಅನ್ನ, ಖಿಚಡಿ,ಕುಲ್ಚಾ, ಭತುರಾ, ಪಾವ್-ಬಾಜಿ, ಮಸಾಲಾ ದೋಸೆ ಸೇರಿದಂತೆ ಕೆಲ ದಕ್ಷಿಣ ಭಾರತದ ಆಹಾರದ ಒಳಗೊಂಡಿದ್ದು, ಇದಕ್ಕೆ 50 ರೂ. ದರ ನಿಗದಿ ಮಾಡಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್ ಗ್ಲಾಸ್ ಮತ್ತು 1 ಲೀಟರ್ ಕುಡಿಯುವ ನೀರಿನ ಬಾಟಲಿಗಳು ಲಭ್ಯವಿರುತ್ತವೆ. ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ನಿಲ್ದಾಣಗಳು ಗುರುತಿಸಿ ವಿಸ್ತರಿಸಲಾಗುವುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಗೆ ತಿಳಿಸಿದ್ದಾರೆ.