ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭಯಾನಕ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬನನ್ನ ಇಂದು ಬೆಳಿಗ್ಗೆ ಬಂಧಿಸಲಾಗಿತ್ತು. ಮಹಿಳೆಯರ ವೀಡಿಯೊ ವೈರಲ್ ಆದ ನಂತರ 32 ವರ್ಷದ ವ್ಯಕ್ತಿಯನ್ನು ಹುಯಿರೆಮ್ ಹೆರಾದಾಸ್ ಸಿಂಗ್ ಎಂದು ಗುರುತಿಸಲಾಗಿದ್ದು, ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದೆ. ವೀಡಿಯೊದಲ್ಲಿ ಆತ, ಹಸಿರು ಟೀ ಶರ್ಟ್ ಧರಿಸಿ ಮಹಿಳೆಯರಲ್ಲಿ ಒಬ್ಬರನ್ನು ಎಳೆದೊಯ್ಯುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿರೇನ್, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ಮಾನವೀಯತೆಯ ಅಪರಾಧ ಎಂದರು. ಇನ್ನು ವೀಡಿಯೊ ನೋಡಿದ ನಂತರ ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ. ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂದು ಸಿಎಂ ಹೇಳಿದರು.ವೀಡಿಯೊ ನಮ್ಮ ಗಮನಕ್ಕೆ ಬಂದ ಕೂಡಲೇ, ನಾವು ಆರೋಪಿಗಳನ್ನ ಗುರುತಿಸಿ ಕ್ರಮ ಕೈಗೊಂಡಿದ್ದೇವೆ. ಘಟನೆಯಲ್ಲಿ ಭಾಗಿಯಾಗಿರುವ ಇತರ ಜನರನ್ನು ಆದಷ್ಟು ಬೇಗ ಬಂಧಿಸಲಾಗುವುದು. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಮಣಿಪುರ ರಾಜ್ಯಪಾಲ ಅನುಸೂಯಾ ಉಕೆ ಮಾತನಾಡಿ, ನಾನು ಡಿಜಿಪಿಗೆ ಕರೆ ಮಾಡಿ ಎಲ್ಲಾ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ನಿರ್ದೇಶನ ನೀಡಿದ್ದೇನೆ. ಎಫ್‌ಐಆರ್ ದಾಖಲಾದ ಪೊಲೀಸ್ ಠಾಣೆಯಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ನಾನು ಅವರನ್ನ ಕೇಳಿದೆ. ಪೊಲೀಸರು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.