ಮಾ. 11-13: ಕರ್ಣಾವತಿಯಲ್ಲಿ ಆಯೋಜನೆಗೊಂಡಿದೆ ಅಖಿಲ ಭಾರತೀಯ ಪ್ರತಿನಿಧಿ ಸಭಾ

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಹಮದಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಅಖಿಲ ಭಾರತ ಪ್ರತಿನಿಧಿ ಸಭಾ’ (ಎಬಿಪಿಎಸ್)ವು ಮಾ. 11ರಿಂದ 13ರವರೆಗೆ ಮೂರು ದಿನಗಳ ಕಾಲ ಗುಜರಾತ್‌ನ ಕರ್ಣಾವತಿಯಲ್ಲಿ ಜರಗಲಿದೆ.
ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಅವರು ಎಬಿಪಿಎಸ್ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರ ಮಾರ್ಗದರ್ಶನದಲ್ಲಿ ಈ ಸಭೆ ನಡೆಯಲಿದೆ. ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಭೆಯನ್ನು ನಿರ್ವಹಿಸಲಿದ್ದಾರೆ. ಸಭೆಯಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಸಹಸರಕಾರ್ಯವಾಹರು, ಪ್ರಾಂತ ಮಟ್ಟದ ಅಧಿಕಾರಿಗಳು, ಸಂಘದ ವಿವಿಧ ಕ್ಷೇತ್ರದ ಪ್ರಮುಖ ಅಧಿಕಾರಿಗಳು, ಕಾರ್ಯಕಾರಿಣಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಭಾರತೀಯ ಮಜ್ದೂರ್ ಸಂಘ, ಎಬಿವಿಪಿ, ರಾಷ್ಟ್ರ ಸೇವಿಕಾ ಸಮಿತಿ, ವಿಹಿಂಪ ಹೀಗೆ ಅನೇಕ ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ.

ಎಬಿಪಿಎಸ್‌ನಲ್ಲಿ 1248 ಪ್ರತಿನಿಧಿಗಳು ಭಾಗಿ:
ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ 2020ರಲ್ಲಿ ಬೈಠಕ್ ನಡೆಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಬಿಪಿಎಸ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ಆನ್‌ಲೈನ್ ಮತ್ತು ಭೌತಿಕವಾಗಿ ಮಿಶ್ರ ರೀತಿಯಲ್ಲಿ ಬೈಠಕ್ ನಡೆಸಲಾಗಿತ್ತು. ಈ ಬಾರಿ ಪರಿಸ್ಥಿತಿ ಸುಧಾರಿಸಿದೆ, ಆದರೂ ಇಲ್ಲಿನ ಸರಕಾರದ ಕೊರೋನಾ ಪ್ರತಿಬಂಧವನ್ನು ಪಾಲಿಸಿ, ಸಭೆಯ ಅಪೇಕ್ಷಿತರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ವಾರ್ಷಿಕವಾಗಿ ನಡೆಯುವ ಎಬಿಪಿಎಸ್‌ನಲ್ಲಿ 1,500 ಮಂದಿ ಭಾಗವಹಿಸುತ್ತಿದ್ದರೆ, ಈ ಬಾರಿ 1,248 ಜನ ಪ್ರತಿನಿಧಿಗಳಷ್ಟೇ ಭಾಗವಹಿಸುತ್ತಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿ ಮಹತ್ವದ ಬೈಠಕ್:
ಮೂರು ದಿನಗಳ ಕಾಲ ನಡೆಯುವ ಈ ಬೈಠಕ್ ಆರ್‌ಎಸ್‌ಎಸ್‌ನ ವಿವಿಧ ರೀತಿಯ ಸಭೆಗಳಲ್ಲಿ ಸಂಖ್ಯೆಯ ದೃಷ್ಟಿಯಿಂದ ಮತ್ತು ನಿರ್ಣಯ ಪ್ರಕ್ರಿಯೆಯ ದೃಷ್ಟಿಯಿಂದಲೂ ಬಹಳ ಮಹತ್ವಪೂರ್ಣವಾಗಿದೆ. ಈ ಸಭೆಯಲ್ಲಿ ಪ್ರಮುಖವಾಗಿ ಆರ್‌ಎಸ್‌ಎಸ್‌ನ ಮುಂದಿನ ಕಾರ್ಯವಿಧಿ, ಕಾರ್ಯವಿಸ್ತಾರ ಹಾಗೂ ಸರಕಾರ್ಯವಾಹರ ವಿವೇಚನೆಯಂತೆ ಉಳಿದ ವಿಚಾರಗಳು ಚರ್ಚೆಯಾಗುತ್ತವೆ. ಅಲ್ಲದೆ ಮುಂದಿನ ವರ್ಷಗಳ ಯೋಜನೆಯನ್ನು ಆಯಾ ಪ್ರಾಂತದಿಂದ ಮಾಡಲಾಗುತ್ತಿದ್ದು, ಅದನ್ನು ಈ ಸಭೆಯಲ್ಲಿ ನಿಶ್ಚಯ ಮಾಡಲಾಗುತ್ತದೆ.

ಸಂಘದ ಶಾಖೆಗಳನ್ನು 1ಲಕ್ಷಕ್ಕೇರಿಸುವ ಗುರಿ:
2025ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ಪೂರೈಸುತ್ತಿದ್ದು, ಕಳೆದ ವರ್ಷದಿಂದಲೇ ವಿಶೇಷ ಕಾರ್ಯ ವಿಸ್ತಾರ ಯೋಜನೆ ಮಾಡಲಾಗಿದೆ. ಅದರ ಪ್ರಗತಿ ಹಾಗೂ ಆಯಾ ಪ್ರಾಂತದ ಯೋಜನೆಗಳನ್ನೂ ಅಂತಿಮಗೊಳಿಸಲಾಗುತ್ತದೆ. ಸಂಘದ ಶತಾಬ್ಧಿ ಯೋಜನೆಯಲ್ಲಿ ಈಗಾಗಲೇ ಇರುವ 55,000 ಶಾಖೆಗಳನ್ನು 1ಲಕ್ಷ ಶಾಖೆಗಳನ್ನಾಗಿಸುವ ಗುರಿ ಹೊಂದಿದೆ. ಸ್ವಾತಂತ್ರ್ಯ ಮಹೋತ್ಸವದ 75ನೇ ವರ್ಷದ ಆಚರಣೆಗಳಿಗೂ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು, ‘ಅನ್ಸಂಗ್ ಹೀರೋ’ಗಳನ್ನು ಪರಿಚಯಿಸುವ ವಿಶಿಷ್ಟವಾದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಅಲ್ಲದೆ, ವರ್ತಮಾನದಲ್ಲಿನ ವಿಶೇಷವಾದ ಘಟನೆಗಳ ಕುರಿತಾಗಿ ಆಯಾ ಪ್ರಾಂತದ ಪ್ರತಿನಿಧಿಗಳಿಂದ ವಾಸ್ತವಿಕ ವರದಿಯನ್ನು ತೆಗೆದುಕೊಳ್ಳುವುದು ಹಾಗೂ ಜನರ ಮನಸ್ಸಿಗೆ ಹತ್ತಿರವಿರುವ ವಿಚಾರಗಳನ್ನು ತಿಳಿದುಕೊಳ್ಳುವುದು ಮತ್ತು ಅದರ ವಿಚಾರ ವಿಮರ್ಶೆಗಳನ್ನು ನಡೆಸುವುದು ಈ ಸಭೆಯ ವಿಶಿಷ್ಟತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!