ಮಾ. 12ರಂದು ಪ್ರಧಾನಿಯಿಂದ ಮೈಸೂರು-ಬೆಂಗಳೂರು ಹೆದ್ದಾರಿ ಲೋಕಾರ್ಪಣೆ

ಹೊಸ ದಿಗಂತ ವರದಿ, ಮಂಡ್ಯ :

ಪ್ರಧಾನಿ ನರೇಂದ್ರಮೋದಿಯವರು ಮಾ. 12ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡುವರು. ಬಳಿಕ ಮೈಸೂರು-ಕುಶಾಲನಗರ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡುವರು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿರುವ ಮೋದಿಯವರು ಬಳಿಕ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ನಗರದ ಪ್ರವಾಸಿ ಮಂದಿರ ವೃಕ್ಕೆ ಬೆಳಗ್ಗೆ ಸುಮಾರು 11.35ಕ್ಕೆ ಆಗಮಿಸುವರು. ಅಲ್ಲಿಂದ ನಂದಾ ಚಿತ್ರಮಂದಿರದವರೆಗೆ ಒಂದು ಬದಿ ರಸ್ತೆಯಲ್ಲಿ ಮೋದಿಯವರು ರೋಡ್‌ಶೋ ನಡೆಸಲಿದ್ದಾರೆ.

ರಸ್ತೆಯ ಎರಡೂ ಕಡೆಗಳಲ್ಲೂ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಎರಡೂ ಬದಿಯಲ್ಲೂ ಜನರು ನಿಂತು ಮೋದಿಯವರನ್ನು ನೋಡಲಿದ್ದಾರೆ. ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಬದಿಯಲ್ಲಿ ಮೋದಿಯವರನ್ನು ವೀಕ್ಷಿಸುವರು. ಜನರತ್ತ ಕೈ ಬೀಸುತ್ತಲೇ ರೋಡ್‌ಶೋನಲ್ಲಿ ಸಾಗುವ ಪ್ರಧಾನಿಯವರು ನಂದಾ ಚಿತ್ರಮಂದಿರದ ಬಳಿ ಕಾರನ್ನೇರಿ ಮುಂದೆ ಸಾಗಲಿದ್ದಾರೆ. ನಗರದ ಹೊರ ವಲಯದಲ್ಲಿರುವ ಅಮರಾವತಿ ಹೊಟೇಲ್ ಸಮೀಪ ಹೆದ್ದಾರಿಗೆ ತಲುಪುವ ಮೋದಿಯವರ ಕಾರು, ನಂತರ ಹೆದ್ದಾರಿಯಲ್ಲೇ ಮುಂದೆ ಸಾಗಲಿದೆ ಎಂದು ವಿವರಿಸಿದರು.

ಗೆಜ್ಜಲಗೆರೆಗೂ ಮುನ್ನ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ನಿಗಧಿಪಡಿಸಿರುವ ಸ್ಥಳದಲ್ಲಿ ಜಾನಪದ ಕಲಾ ತಂಡಗಳು, ಸುಮಾರು 500ಕ್ಕೂ ಹೆಚ್ಚು ಮಂದಿ ಕಲಾವಿದರು ಮೋದಿಯವರನ್ನು ತಮ್ಮ ಕಲಾವೈಭವದ ಪ್ರದರ್ಶನ ನೀಡಿ ಸ್ವಾಗತಿಸಲಿದ್ದಾರೆ. ಬಳಿಕ 50 ಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗುವ ಮೋದಿಯವರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡುವರು. ನಂತರ ವೇದಿಕೆಗೆ ಆಗಮಿಸುವರು ಎಂದು ಹೇಳಿದರು.

3430 ಕೋಟಿ ವೆಚ್ಚದ ಹೆದ್ದಾರಿಗೆ ಭೂಮಿಪೂಜೆ 
ಇದೇ ವೇಳೆ ಪ್ರಧಾನಿ ಮೋದಿಯವರು ಮೈಸೂರು-ಕುಶಾಲನಗರ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಭೂಮಿ ಪೂಜೆ ಮಾಡಲಿದ್ದು, ಈ ಹೆದ್ದಾರಿ ಮಂಡ್ಯ ಜಿಲ್ಲೆಯಲ್ಲೂ ಸ್ವಲ್ಪ ದೂರ ಸಾಗಲಿದೆ. ಸುಮಾರು 3530 ಕೋಟಿ ರೂ. ವೆಚ್ಚದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವರು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!