ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್ ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿಬಿದ್ದ ದುರಂತದಲ್ಲಿ ಗಾಯಗೊಂಡಿದ್ದ ಯುವತಿಯೊಬ್ಬಳು ಭಾನುವಾರ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ಮೃತಳನ್ನು ಜ್ಯೋತಿ (16) ಎಂದು ಗುರುತಿಸಲಾಗಿದೆ. ದುರ್ಘಟನೆ ಸಂಭವಿಸಿದ ದಿನ ತೇರಿನ ಕೆಳಗೆ ಸಿಲುಕಿ 28ರ ಯುವಕ ಲೋಹಿತ್ ಅವರು ಸಾವನ್ನಪ್ಪಿದ್ದರು. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯುವಕ ರಾಕೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಗಾಳಿ ಸಹಿತ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ. ಘಟನೆ ವೇಳೆ ತೇರಿನಲ್ಲಿ ಇದ್ದ ಹಲವರಿಗೂ ಗಾಯಗಳಾಗಿವೆ. ತೇರು ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ವಿಡಿಯೋ ನೋಡಿಯೇ ಗಾಬರಿಯಾಗಿದ್ದಾರೆ.