ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಕ್ತ ಹಣಕಾಸು ವರ್ಷದಲ್ಲಿ 20 ಬಿಲಿಯನ್ ಡಾಲರ್ ಪ್ರಮಾಣದಷ್ಟು ಸ್ಮಾರ್ಟ್ಫೋನ್ ರಫ್ತು ಮಾಡುವ ನಿರೀಕ್ಷೆಯಲ್ಲಿ ಸರ್ಕಾರ ಇದೆ.
2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ 15 ಬಿಲಿಯನ್ ಡಾಲರ್ನಷ್ಟು ಸ್ಮಾರ್ಟ್ಫೋನ್ಗಳು ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗಿದ್ದವು. ಈಗ 2024-25ರ ವರ್ಷದಲ್ಲಿ ಶೇ. 30ರಷ್ಟು ಹೆಚ್ಚು ಸ್ಮಾರ್ಟ್ಫೋನ್ಗಳ ರಫ್ತಿಗೆ ಗುರಿ ಇಡಲಾಗಿದೆ. ಹಿಂದಿನ ವರ್ಷದಲ್ಲಿ ಆದ 15 ಬಿಲಿಯನ್ ಡಾಲರ್ ಸ್ಮಾರ್ಟ್ಫೋನ್ ರಫ್ತಿನಲ್ಲಿ ಆ್ಯಪಲ್ನ ಪಾಲು 10 ಬಿಲಿಯನ್ ಡಾಲರ್ ಇತ್ತು. ಈ ವರ್ಷವೂ ಆ್ಯಪಲ್ ಐಫೋನ್ಗಳ ರಫ್ತು ಗಣನೀಯವಾಗಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸ್ಮಾರ್ಟ್ಫೋನ್ ರಫ್ತು ಹೊಸ ಮೈಲಿಗಲ್ಲು ಮುಟ್ಟುವ ನಿರೀಕ್ಷೆ ಇದೆ.
ಔದ್ಯಮಿಕ ದತ್ತಾಂಶದ ಪ್ರಕಾರ ಏಪ್ರಿಲ್ನಿಂದ ನವೆಂಬರ್ ತಿಂಗಳವರೆಗೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ರಫ್ತು ಪ್ರಮಾಣ 12 ಬಿಲಿಯನ್ ಡಾಲರ್ ಗಡಿ ದಾಟಿದೆ. ಡಿಸೆಂಬರ್ನದ್ದು ಸೇರಿ ಇನ್ನೂ ನಾಲ್ಕು ತಿಂಗಳಲ್ಲಿ ಮತ್ತಷ್ಟು ಎಂಟು ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳ ರಫ್ತಾಗಬಹುದು ಎಂಬುದು ಸರ್ಕಾರದ ಎಣಿಕೆ.
ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆ 2022 ಮತ್ತು 2023ರಲ್ಲಿ ಕಳೆಗುಂದಿತ್ತು. 2024ರಲ್ಲಿ ಮಾರುಕಟ್ಟೆ ಗರಿಗೆದರಿದೆ. ಒಟ್ಟಾರೆ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಉತ್ತಮವಾಗಿರುವುದರಿಂದ ಸ್ಮಾರ್ಟ್ಫೋನ್ ಮಾರುಕಟ್ಟೆ ಕೂಡ ಚೇತರಿಸಿಕೊಂಡಿರಬಹುದು. ಹೀಗಾಗಿ, ಭಾರತದ ಸ್ಮಾರ್ಟ್ಫೋನ್ ರಫ್ತು ಈ ವರ್ಷ ಸೇರಿದಂತೆ ಮುಂಬರುವ ದಿನಗಳಲ್ಲಿ ಗಣನೀಯವಾಗಿ ಹೆಚ್ಚಬಹುದು ಎನ್ನಲಾಗಿದೆ.